ತುಮಕೂರು : ಶಸ್ತ್ರಚಿಕಿತ್ಸೆಯ ಬಳಿಕ 3 ಮಹಿಳೆಯರ ಸಾವು ಪ್ರಕರಣ; ವೈದ್ಯ, ಇಬ್ಬರು ಸಿಬ್ಬಂದಿ ವಜಾ
ಪಾವಗಡ : ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮೂವರು ಬಾಣಂತಿಯರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ತ್ರೀರೋಗ ತಜ್ಞೆ ಹಾಗೂ ಇಬ್ಬರು ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿ ಮಂಗಳವಾರ ಆದೇಶಿಸಲಾಗಿದೆ.
ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಸೂತಿ ತಜ್ಞರು ಹಾಗೂ ಸ್ತ್ರೀರೋಗ ತಜ್ಞರಾದ ಡಾ.ಪೂಜ, ಜಿ.ಪದ್ಮಾವತಿ ಹಾಗೂ ಶಸ್ತ್ರ ಚಿಕಿತ್ಸಾ ವಿಭಾಗದ ತಜ್ಞ ಸಿಬ್ಬಂದಿ ಬಿ.ಆರ್.ಕಿರಣ್ ಅವರನ್ನು ವಜಾ ಮಾಡಲಾಗಿದೆ. ಕರ್ತವ್ಯ ಲೋಪ, ನಿರ್ಲಕ್ಷ್ಯ, ಬೇಜವಾಬ್ದಾರಿತನ ತೋರಿದ ಆರೋಪದ ಮೇಲೆ ವಜಾಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಸೋಂಕು ಹರಡಿ ಮಹಿಳೆಯರು ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಶಸ್ತ್ರಚಿಕಿತ್ಸಾ ಪ್ರಕ್ರಿಯೆಯಲ್ಲಿ ಲೋಪ ಕಂಡು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು. ಈ ವರದಿ ಆಧಾರದ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ವಿವರ: ಪಾವಗಡ ಪಟ್ಟಣದಲ್ಲಿ ನೂತನವಾಗಿ ಆರಂಭವಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಫೆ.22ರಂದು ಏಳು ಜನ ಮಹಿಳೆಯರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಪೈಕಿ ವೀರ್ಲಗೋಂದಿ ಗ್ರಾಮದ ಅನಿತಾ(30) ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಈಕೆ ಫೆ.22ರಂದು ಮೃತಪಟ್ಟಿದ್ದಾರೆ. ಅದೇ ರೀತಿ ರಾಜವಂತಿ ಮೂಲದ ಅಂಜಲಿ ಎನ್ನುವ 20 ವರ್ಷದ ಮಹಿಳೆಗೆ ಸಿಸರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಈಕೆ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಫೆ.24ರಂದು ಮೃತಪಟ್ಟಿದ್ದಾರೆ. ಮತ್ತೋರ್ವ ಮಹಿಳೆಯು ಪಾವಗಡ ತಾಲೂಕಿನ ಬ್ಯಾಡನೂರು ಗ್ರಾಮದ 40ವರ್ಷದ ನರಸಮ್ಮ ಎನ್ನುವರು ಗರ್ಭಕೋಶದ ಶಸ್ತ್ರ ಚಿಕಿತ್ಸೆಗಾಗಿ ಪಾವಗಡ ಸರಕಾರಿ ಆಸ್ಪತ್ರೆಗೆ 22ನೇ ತಾರೀಕಿನಂದು ದಾಖಲಾಗಿದ್ದರು. ಅವರಿಗೂ ಸಹ 22ನೇ ತಾರೀಖಿನಂದೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಇವರು ಸಹ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಫೆ.25ರಂದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮೂವರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾ ವೈದ್ಯಾಧಿಕಾರಿಯವರು ಪರಿಶೀಲನೆ ಮುಂದುವರೆಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಮೃತರ ಕುಟುಂಬಸ್ಥರಿಗೆ ಸರಕಾರದ ವತಿಯಿಂದ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.