ಬಿಜೆಪಿಯವರು ಉದ್ಯಮಿಗಳನ್ನು ಹೆದರಿಸಿ ಬಾಂಡ್ ಪಡೆದುಕೊಂಡಿದ್ದಾರೆ: ಗೃಹ ಸಚಿವ ಪರಮೇಶ್ವರ್
Photo: PTI
ಗುಬ್ಬಿ: ದೇಶದಲ್ಲಿನ ಉದ್ಯಮಿಗಳನ್ನು ಹೆದರಿಸಿ ಬಾಂಡ್ ರೂಪದಲ್ಲಿ ಹಣ ಪಡೆದಿರುವ ಬಿಜೆಪಿಯವರು ಭ್ರಷ್ಟಾಚಾರಿಗಳಲ್ಲವೇ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಗುಬ್ಬಿಯಲ್ಲಿ ಶನಿವಾರ ನಡೆದ ತುಮಕೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಚುನಾವಣಾ ಪ್ರಚಾರದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, "ಯುಪಿಎ ಸರಕಾರದ ವಿರುದ್ಧ ಇಲ್ಲದ ಹಗರಣಗಳನ್ನು ಹುಟ್ಟು ಹಾಕಿ, ಸುಳ್ಳು ಆರೋಪ ಮಾಡಿದರು. ಈಗ ಬಿಜೆಪಿಯವರು ಉದ್ಯಮಿಗಳನ್ನು ಬೆದರಿಸಿ ಬಾಂಡ್ಗಳನ್ನು ಪಡೆದುಕೊಂಡಿದ್ದಾರೆ" ಎಂದು ಹರಿಹಾಯ್ದರು.
ಈ ಲೋಕಸಭಾ ಚುನಾವಣೆಯು ದೇಶದ ಭವಿಷ್ಯವನ್ನು ನಿರ್ಧರಿಸಲಿದೆ. ಮನಮೋಹನ್ ಸಿಂಗ್ ಅವರು ಎರಡು ಅವಧಿಗೆ, ಇಂದಿರಾಗಾಂಧಿ ಅವರು 16 ವರ್ಷ ಪ್ರಧಾನಮಂತ್ರಿಯಾಗಿದ್ದರು. ವಾಜಪೇಯಿ ಅವರು ಸಹ ಪ್ರಧಾನಿಯಾಗಿದ್ದರು. ಯಾವ ಪಕ್ಷದವರು ಸಹ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿಲ್ಲ. ದೇಶ ಹಾಳು ಮಾಡುವ ಕೆಲಸಕ್ಕೆ ಕೈಹಾಕಿಲ್ಲ. ಆದರೆ, ಬಿಜೆಪಿಯವರು ಕಳೆದ ಹತ್ತು ವರ್ಷದಿಂದ ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಿದ್ದಾರೆ. ಇಂತವರಿಗೆ ಸೂಕ್ತ ಉತ್ತರ ನೀಡಬೇಕು ಎಂದು ಹೇಳಿದರು.
ಮುದ್ದಹನುಮೇಗೌಡ ಅವರು ಸಂಸದರಾಗಿದ್ದಾಗ ಲೋಕಸಭೆಯಲ್ಲಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಕೊಬ್ಬರಿ ರೈತರ ಸಮಸ್ಯೆ, ದಾವಣಗೆರೆ ರಾಯದುರ್ಗ ರೈಲು ಮಾರ್ಗ, ಇಸ್ತ್ರೋ, ಎಚ್ಎಎಲ್ ಬಗ್ಗೆ ಮಾತನಾಡಿದ್ದಾರೆ. ಈ ಹಿಂದಿನ ಸಂಸದರು ಸಂಸತ್ನಲ್ಲಿ ಒಂದೇಒಂದು ಪ್ರಶ್ನೆಯನ್ನು ಕೇಳಿಲ್ಲ. ಸೋಮಣ್ಣನಿಗೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಸಂಸದನಾದರೆ ಬೆಂಗಳೂರಿಗೆ ಹೋಗಿ ಹುಡುಕ ಬೇಕಾಗುತ್ತದೆ ಎಂದರು.
ಸಚಿವ ಕೆ.ಎನ್.ರಾಜಣ್ಣ, ಶಾಸಕರಾದ ಎಸ್.ಆರ್.ಶ್ರೀನಿವಾಸ್, ವೆಂಕಟೇಶ್, ಮಾಜಿ ಶಾಸಕರಾದ ಗೌರಿಶಂಕರ್, ರಫೀಕ್ ಅಹ್ಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳಿಧರ್ ಹಾಲಪ್ಪ, ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಕಾಂಗ್ರೆಸ್ ಮುಖಂಡರಾದ ನಿಕೇತ್ ರಾಜ್ ಮೌರ್ಯ, ಮಹಾಲಿಂಗಪ್ಪ, ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಇದ್ದರು.