ಲೋಕಸಭಾ ಚುನವಣೆ ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿ ಬಾಂಧವ್ಯ ಹೆಚ್ಚಾಗಲಿದೆ : ಎಚ್.ಡಿ.ದೇವೇಗೌಡ
ತುಮಕೂರು: ಒಕ್ಕಲಿಗ ಸಮುದಾಯ ಈ ಚುನಾವಣೆಯಲ್ಲಿ ನನ್ನೊಂದಿಗೆ ಇರಲಿದ್ದು, ನನ್ನ ಕೈ ಬಿಡುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಬಳಿಕ ಮೈತ್ರಿ ಬಾಂಧವ್ಯ ಹೆಚ್ಚಾಗಲಿದೆ. ಕಾರ್ಯಕರ್ತರು, ಮುಖಂಡರು ಒಂದಾಗಿ ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಕರೆ ನೀಡಿದರು.
ದೇಶದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಿದೆ. ಕಾಂಗ್ರೆಸ್ ಎಲ್ಲಿದೆ?, ಹಿಂದೂಸ್ತಾನದಲ್ಲಿ ನಾಲ್ಕೈದು ರಾಜ್ಯಗಳಲ್ಲಿ ಸಣ್ಣ ಪಕ್ಷಗಳ ಸಹಕಾರದಿಂದ ಅಧಿಕಾರ ನಡೆಸುತ್ತಿದೆ ಆದರೂ ಕಾಂಗ್ರೆಸ್ ಮುಖಂಡರು ಜೆಡಿಎಸ್ ಎಲ್ಲಿದೆ ಎಂದು ಪ್ರಶ್ನಿಸುತ್ತಾರೆ ಎಂದು ಕುಟುಕಿದರು.
ಕುಮಾರಸ್ವಾಮಿ ಅವರ ಮಗನನ್ನು ಗೆಲ್ಲಿಸಲು ಆಗಲಿಲ್ಲ ಎನ್ನುತ್ತಾರೆ. ನನ್ನನ್ನು ಚುನಾವಣೆಗೆ ನಿಲ್ಲಿಸಿ ಏನೆಲ್ಲ ಆಟ ಆಡಿದರು ಎನ್ನುವುದು ನನಗೆ ಗೊತ್ತಿದೆ. ನಾನೇನು ಸೀಟು ಕೇಳಿದ್ನಾ?. ಮೈಸೂರಿನಲ್ಲಿ ಸೀಟು ಬೇಕು ಅಂತ ಸಿದ್ದರಾಮಯ್ಯ ಹೈಕಮಾಂಡ್ ಮೂಲಕ ನನ್ನನ್ನು ನಿಲ್ಲುವಂತೆ ಮಾಡಿ ಮುದ್ದಹನುಮೇಗೌಡರನ್ನು ಬಲಿ ಹಾಕಿದರು ಎಂದರು.
ಇದೊಂದು ಚುನಾವಣೆಯಲ್ಲಿ ಸೋಮಣ್ಣ ಅವರನ್ನು ಗೆಲ್ಲಿಸಬೇಕು.ಕಳೆದ ಚುನಾವಣೆ ನನ್ನ ವಿರುದ್ಧ ಅಪಪ್ರಚಾರ ಮಾಡಲು ಬಳಸಿದ ಮುಖಂಡನನ್ನೇ ಪಕ್ಷಕ್ಕೆ ಸೇರಿಸಿಕೊಂಡು ಅಭ್ಯರ್ಥಿ ಮಾಡ್ತೀರಾ, ನನ್ನ ಅಭ್ಯರ್ಥಿ ಪಕ್ಕದಲ್ಲಿಯೇ ಇದ್ದಾರೆ ಎಂದು ಸೋಮಣ್ಣ ಕೈಹಿಡಿದು ಮೇಲೆ ಎತ್ತಿದ್ದರು.
ಸಿದ್ದರಾಮಯ್ಯ ಮಾಡಿದ ಹಲವು ತಪ್ಪುಗಳಿಂದ ಇಂದು ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ಹೋಗಲಿದೆ. ಕಾಲ ಸಮೀಪಿಸುತ್ತಿದೆ, ನಾನು ಮಲಗೋದಿಲ್ಲ, ಏಳನೇ ತಾರೀಕಿನವರೆಗೆ ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹೋಗುತ್ತೇನೆ ಎಂದರು.
ವಿ.ಸೋಮಣ್ಣ ಮಾತನಾಡಿ, ನಾನು ಚುನಾವಣೆಯಲ್ಲಿ ನಿಲ್ಲಲ್ಲು ನನ್ನ ರಾಜಕೀಯ ಗುರುಗಳಾದ ದೇವೇಗೌಡರೇ ಕಾರಣ, ತುಮಕೂರಿಗೆ ಅಭ್ಯರ್ಥಿಯಾಗಿ ಇಲ್ಲಿನ ಜನರ ಸೇವೆ ಮಾಡಲು ಹರಸಿ ಕಳುಹಿಸಿಕೊಟ್ಟಿದ್ದಾರೆ ಎಂದರು.
ದೇಶದ ಭದ್ರತೆಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ದೇಶದ ಸರ್ವಾಂಗೀಣ ಅಭಿವೃದ್ಧಿ ಮಾಡಲು ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ಇಂದು ದೇವೇಗೌಡರು ಬೆಂಬಲ ನೀಡಿದ್ದಾರೆ. ದೇವೇಗೌಡರು ಏನು ಸೂಚನೆ ನೀಡುತ್ತಾರೋ ಅದೇ ರೀತಿ ನಾನು ನಡೆದುಕೊಳ್ಳುತ್ತೇನೆ ಎಂದರು.