ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಬೆಳ್ತಂಗಡಿಯ ಮೂವರ ಹತ್ಯೆ ಪ್ರಕರಣ: ಆರು ಮಂದಿ ಪೊಲೀಸ್ ವಶಕ್ಕೆ?
ಶಾಹುಲ್, ಇಸಾಕ್, ಸಿದ್ದೀಕ್
ಬೆಳ್ತಂಗಡಿ/ತುಮಕೂರು, ಮಾ.23: ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಬೆಳ್ತಂಗಡಿಯ ಮೂವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಆರು ಮಂದಿಯನ್ನು ತುಮಕೂರಿನ ಕೋರಾ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
ಬೆಳ್ತಂಗಡಿ ತಾಲೂಕಿನ ಟಿ.ಬಿ.ಕ್ರಾಸ್ ನಿವಾಸಿ, ಆಟೋ ಚಾಲಕ ಶಾಹುಲ್ ಹಮೀದ್, ಮದ್ದಡ್ಕ ನಿವಾಸಿ ಇಸಾಕ್ ಹಾಗೂ ಶಿರ್ಲಾಲು ಗ್ರಾಮದ ನಿವಾಸಿ ಸಿದ್ದೀಕ್ ಎಂಬವರನ್ನು ತಂಡವೊಂದು ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ಹೇಳಿ ತುಮಕೂರಿಗೆ ಕರೆಸಿಕೊಂಡು ಹಣ ದೋಚಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಆರೋಪಿಗಳು ಬೆಳ್ತಂಗಡಿಗೆ ಬಂದಿದ್ದರೇ?
ಪ್ರಕರಣದ ಆರೋಪಿಗಳು ಬೆಳ್ತಂಗಡಿಗೆ ಬಂದು ವ್ಯವಹಾರ ಕುದುರಿಸಿದ್ದರು ಎಂಬ ಅನುಮಾನವೂ ಇದೀಗ ವ್ಯಕ್ತವಾಗುತ್ತಿದೆ. ತಮಗೆ ಜಮೀನಿನಲ್ಲಿ ಭಾರೀ ಪ್ರಮಾಣದ ಚಿನ್ನ ಸಿಕ್ಕಿದೆ, ಅದನ್ನು ಕಡಿಮೆ ಬೆಲೆಗೆ ಕೊಡುವುದಾಗಿ ಹೇಳಿ ಈ ತಂಡ ವ್ಯವಹಾರ ಕುದುರಿಸಿದೆ ಎನ್ನಲಾಗಿದೆ. ಬೆಳ್ತಂಗಡಿಗೆ ಬಂದಿದ್ದ ದುಷ್ಕರ್ಮಿಗಳ ತಂಡ ಇಸಾಕ್ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದೆ. ತುಮಕೂರಿನ ಆ ತಂಡ ಇವರನ್ನು ನಂಬಿಸಿ ತುಮಕೂರಿಗೆ ಕರೆಸಿಕೊಂಡಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ. ತುಮಕೂರಿಗೆ ತೆರಳಿದ್ದ ಈ ಮೂವರನ್ನು ಹತ್ತು ದಿನಗಳಿಗೂ ಹೆಚ್ಚು ಕಾಲ ಅಲ್ಲಿಯೇ ಇರಿಸಿಕೊಂಡ ದುಷ್ಕರ್ಮಿಗಳಗು ಬಳಿಕ ವಂಚಿಸಿ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇದೀಗ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಡಿ.ಎನ್.ಎ. ಪರೀಕ್ಷೆಯ ಬಳಿಕ ಮೃತದೇಹ ಹಸ್ತಾಂತರ
ಮೂರೂ ಮೃತದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಗುರುತು ಪತ್ತೆ ಅಸಾಧ್ಯವಾಗಿದೆ. ಈ ಹಿನ್ನಲೆಯಲ್ಲಿ ಡಿ.ಎನ್.ಎ. ಪರೀಕ್ಷೆಯ ಬಳಿಕ ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದುಬಂದಿದೆ.
ಮೂರು ಕುಟುಂಬಗಳ ಸದಸ್ಯರು, ಸಂಬಂಧಿಕರು ತುಮಕೂರಿಗೆ ತೆರಳಿದ್ದಾರೆ.
ತುಮಕೂರು ತಾಲೂಕಿನ ಕುಚ್ಚಂಗಿ ಕೆರೆಯ ಬಳಿ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೂರು ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಟಿ.ಬಿ. ಕ್ರಾಸ್ ನಿವಾಸಿ ಆಟೋ ಚಾಲಕ ಶಾಹುಲ್ ಹಮೀದ್(45), ಮದ್ದಡ್ಕ ನಿವಾಸಿ ಇಸಾಕ್(56) ಮತ್ತು ಶಿರ್ಲಾಲು ಗ್ರಾಮದ ನಿವಾಸಿ ಸಿದ್ದೀಕ್ (34) ಎಂಬವರ ಮೃತದೇಹ ಶುಕ್ರವಾರ ಪತ್ತೆಯಾಗಿತ್ತು.