ಪತ್ರಕರ್ತರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅನುಕೂಲಕ್ಕಿಂತ ಸವಾಲುಗಳೇ ಹೆಚ್ಚು : ಸುದರ್ಶನ್

ತುಮಕೂರು : ಪತ್ರಿಕೋದ್ಯಮ ಇಂದು ತಾಂತ್ರಿಕವಾಗಿ ಬಹಳಷ್ಟು ಅಭಿವೃದ್ಧಿ ಹೊಂದಿದ್ದು, ಪತ್ರಕರ್ತರಿಗೆ ಸಾಮಾಜಿಕ ಜಾಲತಾಣದಲ್ಲಿನ ಅನುಕೂಲಗಳಿಗಿಂತ ಸವಾಲುಗಳು ಹೆಚ್ಚಾಗಿವೆ ಎಂದು ಪತ್ರಕರ್ತ ಸುದರ್ಶನ್ ಚನ್ನಂಗಿಹಳ್ಳಿ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರು ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಎರಡು ದಿನಗಳ ಕರ್ನಾಟಕ ಕಾರ್ಯ ನಿರ್ವಹಿತ ಪತ್ರಕರ್ತರ ಸಂಘದ 39ನೇ ಸಮ್ಮೇಳನದ ಸಾಮಾಜಿಕ ಜಾಲತಾಣ ಮತ್ತು ಪತ್ರಕರ್ತರ ಸವಾಲುಗಳು ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದವರು.
ನಮ್ಮ ಮೊಬೈಲ್‌ಗಳಲ್ಲಿ ಒಂದು ಆ್ಯಪ್ ಹೇಗೆ ಅಪ್ಡೇಟ್ ಆಗುತ್ತದೆಯೋ ಅದೇ ರೀತಿಯಾಗಿ ತಾಂತ್ರಿಕವಾಗಿ ಇಂದಿನ ಪತ್ರಕರ್ತರು ಬದಲಾವಣೆ ಕಾಣಬೇಕಿದೆ. ಪೆನ್ನಿನಲ್ಲಿ ಬರೆಯುವ ಅನೇಕ ಪತ್ರಕರ್ತರು ಇಂದಿನ ಡಿಜಿಟಲ್ ಮಾಧ್ಯಮಕ್ಕೆ ಅನಿವಾರ್ಯವಾಗಿ ಹೊಂದಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಸರಕಾರಿ ಕಚೇರಿಯಲ್ಲಿ ತಾಂತ್ರಿಕ ವ್ಯವಸ್ಥೆಗಳು ಜಾರಿಯಲ್ಲಿವೆ. ಹಾಗೆಯೇ ಇಂದಿನ ಪತ್ರಕರ್ತರು ನವಮಾಧ್ಯಮದ ಆಂತರ್ಯಗಳನ್ನು ಅರಿತುಕೊಂಡು ಪತ್ರಿಕೋದ್ಯಮವನ್ನು ಮುನ್ನ ಡೆಸಬೇಕು ಎಂದು ತಿಳಿಸಿದರು.
ಇಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ಯ ಭಾಷೆಗಳ ಅಕ್ಷರಗಳನ್ನು ಲೀಲಾಜಾಲವಾಗಿ ಕನ್ನಡಕ್ಕೆ ತರ್ಜುಮೆ ಮಾಡುವ ಸರಳ ವಿಧಾನವನ್ನು ಕಂಡುಕೊಂಡಿದೆ. ಆದರೆ ಇದರಲ್ಲಿನ ಕೆಲವು ತಾಂತ್ರಿಕ ದೋಷಗಳನ್ನು ಬದಲಾಯಿಸಿಕೊಳ್ಳಬೇಕು. ತಾಂತ್ರಿಕತೆ ನಮ್ಮ ಕೆಲಸವನ್ನು ಕಸಿದುಕೊಂಡಿಲ್ಲ ಬದಲಾಗಿ ಬದಲಾವಣೆಯನ್ನು ಕಂಡುಕೊಳ್ಳುವ ಮಾರ್ಗವನ್ನು ತಿಳಿಸಿದೆ. ಆದರೆ ಇದರ ಅನುಕೂಲ ಪಡೆಯುವ ಜೊತೆಗೆ ಇದರಲ್ಲಿ ಉಂಟಾಗುವ ಅಪಾಯಗಳನ್ನು ಅರಿಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಅಜಿತ್ ಹನು ಮಕ್ಕನವರ್, ಗೌರಿ ಅಕ್ಕಿ, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಬಿ.ಟಿ. ಮುದ್ದೇಶ್ ಮಾತನಾಡಿದರು. ಶಿವಕುಮಾರ್ ಕಣಸೋಗಿ, ರವಿಕುಮಾರ್ ಮಹೇಶ್, ಹರೀಶ್ ಆಚಾರ್ಯ, ಉಮೇಶ್ ಭಟ್, ಚಿದಾನಂದ ಪಟೇಲ್, ಮಹಾಂತೇಶ್, ಕರ್ನಾಟಕ ಕಾರ್ಯ ನಿರ್ವಹಿತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.