ತುಮಕೂರು | ಪ್ರವಾಸೋದ್ಯಮ ಅಭಿವೃದ್ಧಿಗೆ ಅಮಾನಿಕೆರೆಯಲ್ಲಿ 25 ಕೋಟಿ ರೂ. ವೆಚ್ಚದ ಗಾಜಿನ ಸೇತುವೆ : ಜಿ.ಪರಮೇಶ್ವರ್

ತುಮಕೂರು: ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನಗರದ ಅಮಾನಿಕೆರೆಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಗ್ಲಾಸ್ ಬ್ರಿಡ್ಜ್(ಗಾಜಿನ ಸೇತುವೆ) ನಿರ್ಮಾಣಕ್ಕೆ ನೀಲ ನಕ್ಷೆಯನ್ನು ಸಿದ್ಧಪಡಿಸಲಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ತಿಳಿಸಿದ್ದಾರೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು 200 ಕೋಟಿ ರೂ.ಗಳ ಅನುದಾನಕ್ಕೆ ಸರಕಾರ ಅನುಮೋದನೆ ನೀಡಿದ್ದು, ಈ ಅನುದಾನದಲ್ಲಿ 25 ಕೋಟಿ ರೂ.ಗಳನ್ನು ಬಳಸಿಕೊಂಡು ಗಾಜಿನ ಸೇತುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಮಹಾನಗರ ಪಾಲಿಕೆ ವ್ಯಾಪ್ತಿಯ 5 ವಾರ್ಡುಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದ್ದು, ಉಳಿದ 30 ವಾರ್ಡುಗಳ ಅಭಿವೃದ್ಧಿಗಾಗಿ 200 ಕೋಟಿ ರೂ.ಗಳನ್ನು ವ್ಯಯಿಸಲಾಗುವುದು. ಈ ಅನುದಾನವನ್ನು ಬಳಸಿ ಕೊಂಡು ಬೆಂಗಳೂರಿನ ಲಾಲ್‍ಬಾಗ್ ಮಾದರಿಯಲ್ಲಿ ನಗರದ ಅಕ್ಕ-ತಂಗಿ ಕೆರೆ ಅಭಿವೃದ್ಧಿ, 137 ಕೋಟಿ ರೂ. ವೆಚ್ಚದಲ್ಲಿ 202 ರಸ್ತೆ ನಿರ್ಮಾಣ, ಅಮಾನಿಕೆರೆಯನ್ನು ಸ್ವಚ್ಛಗೊಳಿಸಿ ಮಕ್ಕಳಿಗಾಗಿ ಸಾಹಸ ಕ್ರೀಡೆಗೆ ಅವಕಾಶ ನೀಡುವುದರೊಂದಿಗೆ ಐಲ್ಯಾಂಡ್, ಬರ್ಡ್ ಪಾರ್ಕ್ ನಿರ್ಮಾಣ,18 ಉದ್ಯಾನವನಗಳ ಅಭಿವೃದ್ಧಿ, ತಲಾ 6 ಕೋಟಿ ರೂ. ವೆಚ್ಚದಲ್ಲಿ ನಗರದ ಖಾಸಗಿ ಬಸ್ ನಿಲ್ದಾಣದ ಆಧುನೀಕರಣ ಹಾಗೂ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಕಟ್ಟಡವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ನಗರದ ಒಳಚರಂಡಿ ವ್ಯವಸ್ಥೆಗಾಗಿ ಪ್ರತ್ಯೇಕವಾಗಿ 50ಕೋಟಿ ರೂ.ಗಳನ್ನು ಮೀಸಲಿಡಲಾಗಿದೆಯಲ್ಲದೆ ಕರ್ನಾಟಕ ಗಣಿಬಾಧಿತ ಪರಿಸರದ ಪುನಃಶ್ಚೇತನ ನಿಧಿಯಡಿ 131 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ಕಟ್ಟಡವನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಗುವುದು ಎಂದು ಹೇಳಿದರು.
ತುಮಕೂರಿನಲ್ಲಿ ಬಳಿಯೇ ಏರ್‌ಪೋರ್ಟ್ ನಿರ್ಮಾಣ :
ರಾಜ್ಯದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರಿನ ಆಸು-ಪಾಸಿನಲ್ಲಿ ನಿರ್ಮಿಸುವಂತೆ ಐಟಿಬಿಟಿ ಸಚಿವರಿಗೆ ಮನವಿ ಮಾಡಲಾಗಿದ್ದು, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಜಿಲ್ಲೆಯ ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡತೆ ರಾಷ್ಟ್ರೀಯ ಹೆದ್ದಾರಿ 48ರ ಸಮೀಪ 3,000 ಎಕರೆ ಹಾಗೂ ಶಿರಾ ತಾಲ್ಲೂಕಿನ ಸೀಬಿ ದೇವಸ್ಥಾನದ ಸಮೀಪ 5000 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಜಿಲ್ಲೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಂಜೂರಾತಿ ನೀಡಬೇಕೆಂದು ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ಪಕ್ಷಾತೀತವಾಗಿ ಸರಕಾರ ಮೇಲೆ ಒತ್ತಾಯ ತರಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಹೆಲಿಕಾಪ್ಟರ್ ತಯಾರಿಕಾ ಘಟಕ ಕಾರ್ಯನಿರ್ವಹಿಸುತ್ತಿರುವ ಗುರುತಿಗಾಗಿ ನಗರದ ಹೃದಯಭಾಗದ ಟೌನ್‍ಹಾಲ್ ಪಕ್ಕದಲ್ಲಿ ಹೆಲಿಕಾಪ್ಟರ್ ಮಾದರಿಯನ್ನು ಇರಿಸಲಾಗುವುದು. ಪಾಲಿಕೆ ಆವರಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ನಿರ್ಮಿಸುವ ಕುರಿತು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಸರಕಾರದಿಂದ ಅನುಮತಿ ದೊರೆತ ನಂತರ ಪುತ್ಥಳಿಯನ್ನು ಸ್ಥಾಪಿಸಲಾಗುವುದು. ಪುತ್ಥಳಿಯನ್ನು ಸ್ಥಾಪನೆಗೆ ಶ್ರೀಸಿದ್ಧಾರ್ಥ ಸಂಸ್ಥೆಯಿಂದ 36 ಲಕ್ಷ ರೂ.ಗಳನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆಗಳು ಖಾಲಿಯಿದ್ದು, ಹಂತ-ಹಂತವಾಗಿ ಖಾಲಿ ಹುದ್ದೆಗಳ ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದರಲ್ಲದೆ, ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುವ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರದಲ್ಲೇ ಮಂಜೂರಾತಿಯ ಹಸಿರು ನಿಶಾನೆ ದೊರೆಯಲಿದೆ ಎಂದರು.
ಜಿಎಸ್‍ಟಿ ತೆರಿಗೆ ಸಂಗ್ರಹದಲ್ಲಿ ರಾಜ್ಯದ ಪಾಲು ಹೆಚ್ಚಿದ್ದರೂ ಕೇಂದ್ರವು ರಾಜ್ಯದ ಪಾಲನ್ನು ನೀಡದೆ ತಾರತಮ್ಯ ಮಾಡುತ್ತಿದೆ. ಈ ಬಾರಿ ಕೇಂದ್ರದ ಆಯ-ವ್ಯಯದಲ್ಲಿ ರಾಜ್ಯದ ಪಾಲಿನ ತೆರಿಗೆ ಹಣ ನೀಡುವ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಗಾಗಿ 5300 ಕೋಟಿ ರೂ. ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.