ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡಿದರೆ, ಮಂತ್ರಿಗಿರಿ ಬಿಡಲು ಸಿದ್ಧ : ಕೆ.ಎನ್.ರಾಜಣ್ಣ

ಕೆ.ಎನ್.ರಾಜಣ್ಣ
ತುಮಕೂರು : ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ಸಿದ್ದಾಂತ ಇದೆ. ಅದಕ್ಕೆ ನಾನು ಬದ್ಧನಾಗಿದ್ದೇನೆ. ಒಂದು ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ, ಮಂತ್ರಿಗಿರಿಯನ್ನು ಬಿಡಲು ಸಿದ್ದ. ಈ ಮಾತನ್ನು ವರಿಷ್ಠರ ಮುಂದೆ ಸ್ಪಷ್ಟಪಡಿಸಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬೇರೆಯವರ ಅಭಿಪ್ರಾಯ ಗೊತ್ತಿಲ್ಲ. ನಾನು ಕಳೆದ 3 ದಿನಗಳಿಂದ ದೆಹಲಿಯಲ್ಲೇ ಇದ್ದೆ. 2023ರ ಮೇ.18 ರಂದು ಪಕ್ಷದ ಹೈಕಮಾಂಡ್ ಬಿಡುಗಡೆ ಮಾಡಿದ್ದ ಸುತ್ತೊಲೆಯಲ್ಲಿಯೇ ಮುಂದಿನ ಲೋಕಸಭಾ ಚುನಾವಣೆವರೆಗೆ ಕೆಪಿಸಿಸಿ ಅಧ್ಯಕ್ಷರ ಮುಂದುವರಿಕೆ ಎಂಬುದನ್ನು ಉಲ್ಲೇಖಿಸಲಾಗಿದೆ. ಈ ಬಗ್ಗೆ ವರಿಷ್ಠರ ಭೇಟಿಯಾದ ಸಂದರ್ಭದಲ್ಲಿ ಗಮನಕ್ಕೆ ತಂದಿದ್ದೇನೆ. ಯಾವ ಲೋಕಸಭಾ ಚುನಾವಣೆ ಎಂಬುದನ್ನು ವರಿಷ್ಠರು ಸ್ಪಷ್ಟಪಡಿಸಬೇಕೆಂದು ಸಹ ಮನವಿ ಮಾಡಿರುವುದಾಗಿ ತಿಳಿಸಿದರು.
5 ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಈಗಾಗಲೇ ನಮ್ಮ ಪಕ್ಷದ ಹಿರಿಯ ಸಚಿವರಾದ ಡಾ. ಜಿ.ಪರಮೇಶ್ವರ್, ಎಚ್.ಸಿ. ಮಹದೇವಪ್ಪ, ಎಂ.ಬಿ. ಪಾಟೀಲ್ ಅವರು ಸಹ ಅದನ್ನೇ ಹೇಳಿದ್ದಾರೆ. ಹಾಗಾಗಿ ನಾನು ಸಹ ಅವರ ಮಾತನ್ನು ನಂಬಿದ್ದೇನೆ ಎಂದು ಹೇಳಿದರು