ಕುಣಿಗಲ್: ಪೊಕ್ಸೊ ಪ್ರಕರಣದಡಿ ಶ್ರೀ ವಿದ್ಯಾ ಚೌಡೇಶ್ವರಿ ಮಹಾಸಂಸ್ಥಾನ ಮಠದ ಬಾಲ ಮಂಜುನಾಥ ಸ್ವಾಮೀಜಿಯ ಬಂಧನ
ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ
ಕುಣಿಗಲ್, ಮಾ.8: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಹಂಗರಹಳ್ಳಿಯ ಶ್ರೀ ವಿದ್ಯಾ ಚೌಡೇಶ್ವರಿ ಮಹಾ ಸಂಸ್ಥಾನ ಮಠದ ಬಾಲ ಮಂಜುನಾಥ ಸ್ವಾಮೀಜಿ ಸಹಿತ ಇಬ್ಬರನ್ನು ಗುರುವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬ್ಲ್ಯಾಕ್ ಮೇಲ್ ದೂರು ಸಲ್ಲಿಸಿ ಸಿಕ್ಕಿಬಿದ್ದ ಸ್ವಾಮೀಜಿ !
ತನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿ ಬಾಲ ಮಂಜುನಾಥ ಸ್ವಾಮೀಜಿ ಆರು ಮಂದಿಯ ವಿರುದ್ಧ ದೂರು ಸಲ್ಲಿಸಿದ್ದರು. ಆದರೆ, ಅದೇ ಆರೋಪಿಗಳು ಸ್ವಾಮೀಜಿಯವರ ಲೈಂಗಿಕ ಹಗರಣವೊಂದನ್ನು ವಿಚಾರಣೆ ವೇಳೆ ಬಯಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯನ್ನು ಗುರುವಾರ ರಾತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ,ವಿ ಅಶೋಕ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಚರ್ಮ ರೋಗಕ್ಕೆ ಚಿಕಿತ್ಸೆ ಕೊಡುವ ನೆಪದಲ್ಲಿ ನನ್ನ ಬೆತ್ತಲೆ ವಿಡಿಯೋ ಮಾಡಿಕೊಂಡು, ನನ್ನನ್ನು ಬ್ಲ್ಯಾಕ್ ಮೇಲೆ ಮಾಡಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆಂದು ಸ್ವಾಮೀಜಿಯು ತನ್ನ ಆಪ್ತ ಸಹಾಯಕ ಅಭಿಲಾಷ್ ಸಹಿತ ಆರು ಮಂದಿಯ ವಿರುದ್ಧ ಕಳೆದ ಫೆ.10ರಂದು ಪೊಲೀಸ್ ದೂರು ನೀಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಭಿಷೇಕ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಸ್ವಾಮೀಜಿಯ ಲೈಂಗಿಕ ಕಿರುಕುಳ ಕೃತ್ಯ ಬಯಲಾಗಿದೆ.
ಸ್ವಾಮೀಜಿ ಹಲವು ದಿನಗಳ ಹಿಂದೆ ಮಠದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದ. ಈ ವಿಚಾರ ಪೊಕ್ಸೋ ಕಾಯ್ದೆಯಡಿ ಬರುವುದರಿಂದ ಮಠಕ್ಕೆ ಆಗಮಿಸಿದ ಪೊಲೀಸರು, ಕಳೆದ ರಾತ್ರಿ ಮಠದಲ್ಲಿ ಪರಿಶೀಲನೆ ನಡೆಸಿದ್ದರು. ಆಗ ಸಿಕ್ಕ ಕೆಲವು ದಾಖಲೆಗಳನ್ನು ಆಧರಿಸಿ, ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.