ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ಗೆ ವಿರೋಧ; ಗೃಹ ಸಚಿವರ ಮನೆ ಮುಂದೆ ಧರಣಿಗೆ ಯತ್ನ
ಮಾಜಿ ಸಚಿವ, ಶಾಸಕರ ಸಹಿತ ಹಲವರು ಪೊಲೀಸ್ ವಶಕ್ಕೆ
ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರ ಗೊಲ್ಲಹಳ್ಳಿ ನಿವಾಸದ ಮುಂಭಾಗ ಧರಣಿ ನಡೆಸಲು ತೆರಳಿದ್ದ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಎಂ.ಟಿ.ಕೃಷ್ಣಪ್ಪ, ಬಿ.ಸುರೇಶಗೌಡ ಸೇರಿದಂತೆ 40ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸಿ, ಅವೈಜ್ಞಾ ನಿಕವಾಗಿರುವ ಈ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿ ಮಾಜಿ ಸಚಿವ ಸೊಗಡು ಶಿವಣ್ಣ ಅವರ ನೇತೃತ್ವದಲ್ಲಿ ವಿವಿಧ ಪಕ್ಷಗಳ ಹಾಲಿ ಮತ್ತು ಮಾಜಿ ಶಾಸಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರ ಮನೆ ಮುಂದೆ ಹೋರಾಟಕ್ಕೆ ಕರೆ ನೀಡಿದ್ದರು. ಅದರಂತೆ ಬೆಳಗ್ಗೆ 7 ಗಂಟೆ ಸುಮಾರಿಗೆ ಪ್ರತಿಭಟನಾ ಸ್ಥಳದ ಸಿದ್ಧತೆಗಳ ಪರಿಶೀಲನೆಗೆ ಮುಖಂಡರಾದ ಪ್ರಭಾಕರ್ ಅವರೊಂದಿಗೆ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಸಚಿವ ಡಾ.ಜಿ.ಪರಮೇಶ್ವರ್ ಅವರ ಗೊಲ್ಲಹಳ್ಳಿಯ ನಿವಾಸದ ಬಳಿ ತೆರಳಿದ್ದ ಸಂದರ್ಭದಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದು ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನ(ಡಿ.ಆರ್.ಗ್ರೌಂಡ್)ಬಳಿ ಕರೆತಂದರು.
ಸೊಗಡು ಶಿವಣ್ಣ ಮೈದಾನದಲ್ಲೇ ಧರಣಿ ಕುಳಿತಿದ್ದು, ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಸೊಗಡು ಶಿವಣ್ಣರವರನ್ನುವಶಕ್ಕೆ ಪಡೆದಿರುವ ಪೊಲೀಸರ ಕ್ರಮ ಖಂಡಿಸಿ ಹಾಗೂ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಿಜೆಪಿ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಗರದ ಡಿಎಆರ್ ಕಚೇರಿ ಮುಂದೆ ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಿದರು.ಡಿಎಆರ್ ಕಚೇರಿ ಮುಂಭಾಗ ಕಪ್ಪುಪಟ್ಟಿ ಧರಿಸಿ ಧರಣಿ ನಡೆಸುತ್ತಿದ್ದ ಮುಖಂಡರಾದ ಧನಿಯಾಕುಮಾರ್, ಕೆ.ಪಿ.ಮಹೇಶ್, ಕುಮಾರಸ್ವಾಮಿ, ಶಬ್ಬೀರ್, ರಾಮಚಂದ್ರರಾವ್, ನವೀನ್, ಶಂಕರಪ್ಪ, ಏಕಾಂತಯ್ಯ, ಜಯಪ್ರಕಾಶ್, ನಾರಾಯಣರಾವ್, ಊರುಕೆರೆ ನಂಜುಂಡಪ್ಪ, ಟಿ.ಜೆ.ಸನತ್, ಗಣೇಶ್ ಮತ್ತಿತರರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಇದೇ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಲು ಮುಂದಾದ ಶಾಸಕರಾದ ಎಂ.ಟಿ.ಕೃಷ್ಣಪ್ಪ ಅವರನ್ನು ಪೊಲೀಸರು ದಾರಿಯ ಮಧ್ಯದಲ್ಲಿಯೇ ವಶಕ್ಕೆ ಪಡೆದು ಡಿ.ಆರ್.ಗ್ರೌಂಡ್ಗೆ ಕರೆತಂದರು.