ಪಾವಗಡ | ಕಾರ್ಮಿಕರು ತೆರಳುತ್ತಿದ್ದ ವಾಹನ ಪಲ್ಟಿ: ಹತ್ತಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

ಪಾವಗಡ: ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ 407 ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ರಾತ್ರಿ ಪಾವಗಡ ತಾಲೂಕಿನ ಬುಗುಡೂರು ಗ್ರಾಮದ ತಿರುವಿನ ಬಳಿ ನಡೆದಿದೆ.
ಈ ಅಪಘಾತದಲ್ಲಿ ಹತ್ತಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಬಿ.ಹೊಸಳ್ಳಿ ತಾಂಡ ಗ್ರಾಮಕ್ಕೆ ಸೇರಿರುವ ನಿರ್ಮಾಣ ಕಾರ್ಮಿಕರು ತಿರುಮಣಿ ಭಾಗದಲ್ಲಿ ಶುಕ್ರವಾರ ಸೆಂಟ್ರಿಂಗ್ ಕೆಲಸ ತೆರಳಿ ಮುಗಿಸಿಕೊಂಡು ಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ದಾರಿಮಧ್ಯೆ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಬಿ.ಹೊಸಳ್ಳಿ ತಾಂಡ ಗ್ರಾಮದ ಲಂಬಾಣಿ ಸಮುದಾಯಕ್ಕೆ ಸೇರಿದ 55 ವರ್ಷದ ತಿಪ್ಪ ನಾಯಕ್ ಎಂಬವರ ಒಂದು ಕೈ ಸಂಪೂರ್ಣ ನಜ್ಜುಗುಜ್ಜಾಗಿದೆ. ಉಳಿದಂತೆ ಲಕ್ಷಮ್ಮ, ಅರುಣಾ, ಕಾವೇರಿ, ಶಾಂತಮ್ಮ, ಶಾಂತಾಬಾಯಿ, ಪ್ರಕಾಶ್, ದೇವಿ ಬಾಯಿ, ಸಕ್ಕಬಾಯಿ ಎಂಬವರು ಸೇರಿದಂತೆ ಹಲವರ ತಲೆ, ಸೊಂಟ ಹಾಗೂ ಇತರ ಅಂಗಾಂಗಗಳಿಗೆ ಗಂಭೀರ ಗಾಯಗಳಾಗಿವೆ.
ಘಟನೆಯ ಬಗ್ಗೆ ಮಾಹಿತಿ ತಿಳಿದು, ಪಾವಗಡ ವೃತ್ತ ನಿರೀಕ್ಷಕ ಸುರೇಶ್ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಘಟನೆ ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.