ಪೊಲೀಸರ ತಂತ್ರಜ್ಞಾನ ಬಳಕೆ ಅಪರಾಧಿಗಳ ಪತ್ತೆಹಚ್ಚುವಿಕೆಗೆ ವೇಗ ನೀಡಿದೆ: ಗೃಹ ಸಚಿವ ಜಿ.ಪರಮೇಶ್ವರ್
ತುಮಕೂರು:ತಂತ್ರಜ್ಞಾನ ಬಳಕೆಯಿಂದ ಪೊಲೀಸರು ಅಪರಾಧ ಪತ್ತೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತಿದ್ದು, ಪ್ರಕರಣಗಳ ಪತ್ತೆ ಸುಲಭವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಚಿಲುಮೆ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಳವು ಪ್ರಕರಣಗಳ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಪೊಲೀಸ್ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಳಕ್ಕೆ ಸರಕಾರ ಪ್ರೋತ್ಸಾಹ ನೀಡುತ್ತಿದೆ.ತಂತ್ರಜ್ಞಾನದ ಸಹಾಯದಿಂದ ಜೈನಮುನಿಯ ಕೊಲೆ,ಉಡುಪಿಯ ಅಜ್ಜಾರು ಕುಟುಂಬದ ಪ್ರಕರಣಗಳ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ತುಮಕೂರು ಪೊಲೀಸ್ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ 2 ದರೋಡೆ,21 ಸುಲಿಗೆ,19 ಸರಗಳ್ಳತನ, 93 ಮನೆಗಳ್ಳತನ, 195 ಸಾಮಾನ್ಯ ಕಳ್ಳತನ, 3 ಜಾನುವಾರು ಕಳ್ಳತನ ಸೇರಿ 333 ಪ್ರಕರಣಗಳನ್ನು ಪತ್ತೆ ಹಚ್ಚಿ 4.09 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು,ಪ್ರಮುಖವಾಗಿ ಉತ್ತರ ಪ್ರದೇಶದ ಕಕ್ರಾಲ ಗ್ಯಾಂಗ್ ಮತ್ತು ಐದು ವರ್ಷಗಳಿಂದ ಮನೆಗಳ್ಳತನ ಮಾಡುತ್ತಾ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡಿದ್ದ ಗ್ಯಾಂಗ್‍ವೊಂದನ್ನು ತುಮಕೂರು ಪೊಲೀಸರು ಪತ್ತೆ ಹಚ್ಚಿ, ವಶಪಡಿಸಿಕೊಂಡ ಮಾಲುಗಳನ್ನು ಮಾಲೀಕರಿಗೆ ಹಿಂದಿರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.