ಸ್ವಯಂ ಘೋಷಿತ ನಾಯಕರಿಂದ ಉಪಚುನಾವಣೆ ಸೋತಿದ್ದೇವೆ: ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
"ಯಡಿಯೂರಪ್ಪ ಅವರು ಸಂಘರ್ಷ, ಸಂಘಟನೆಯಿಂದ ಪಕ್ಷ ಬೆಳೆಸಿದ್ದಾರೆ"
ರೇಣುಕಾಚಾರ್ಯ
ತುಮಕೂರು: ಯಡಿಯೂರಪ್ಪ ಅವರು ಸಂಘರ್ಷ, ಸಂಘಟನೆಯಿಂದ ಪಕ್ಷ ಬೆಳೆಸಿದ್ದಾರೆ. ಆದರೆ ಸ್ವಯಂ ಘೋಷಿತ ನಾಯಕರಿಂದ ಉಪ ಚುನಾವಣೆ ಸೋತಿದ್ದೇವೆ ಎಂದು ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ತುಮಕೂರಿನ ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ಬಳಿಕ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ ಅವರು, ಯಡಿಯೂರಪ್ಪ ಕುಟುಂಬದ ಮೇಲೆ ದುಷ್ಟ ಶಕ್ತಿಯ ದೃಷ್ಟಿ ಬೀಳಬಾರದು. ಮೋದಿ ಅವರಿಗೆ ಒಳ್ಳೆದಾಗಲಿ ಎಂದೂ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು.
ಮುಂದೆ ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. 140 ಸ್ಥಾನ ಗೆದ್ದು ಅಧಿಕಾರ ಹಿಡಿಯುತ್ತೇವೆ. ನಿನ್ನೆ ನಡೆದ ಸಭೆಯಲ್ಲಿ 21 ಜಿಲ್ಲಾ ಅಧ್ಯಕ್ಷರು ವಿಜಯೇಂದ್ರಗೆ ಬೆಂಬಲ ಕೊಟ್ಟಿದ್ದಾರೆ ಎಂದರು.
ಬಿ.ಎಸ್.ಯಡಿಯೂರಪ್ಪನವರು ಸೈಕಲ್ ತುಳಿದು ಪಕ್ಷ ಕಟ್ಟಿದ್ದಾರೆ. ಅವರ ಜೊತೆ ಮಲ್ಲಿಕಾರ್ಜುನಯ್ಯ, ಶಂಕರ ಮೂರ್ತಿಯಂತಹ ನಾಯಕರು ಬಿಜೆಪಿ ಪಕ್ಷವನ್ನು ಬೆಳೆಸಿದ್ದಾರೆ. ಯಡಿಯೂರಪ್ಪರು ರಾಜ್ಯಾಧ್ಯಕ್ಷರಾದಾಗ ಅವರಿಗೆ 45 ವರ್ಷ. ವಿಜಯೇಂದ್ರ ಅವರಿಗೆ 49 ವರ್ಷ, ಯಡಿಯೂರಪ್ಪನವರು ವಿಜಯೇಂದ್ರಗಿಂತ ಚಿಕ್ಕ ವಯಸ್ಸಿನಲ್ಲಿ ರಾಜ್ಯಾಧ್ಯಕ್ಷರಾಗಿದ್ದರು. ಹೀಗಿದ್ದಾಗ ವಿಜಯೇಂದ್ರ ಕಿರಿಯ ಹೇಗಾಗುತ್ತಾರೆ? ಎಂದು ಪ್ರಶ್ನಿಸಿದರು.