ತಾಯಂದಿರಿಗೆ 2000 ಕೊಡ್ತಿದ್ದಾರೆ... ಯಜಮಾನ್ರು ದುಡಿಮೆಯ 90 ಭಾಗ ಕುಡಿಯುತ್ತಿದ್ದಾರೆ: ಕುಮಾರಸ್ವಾಮಿ
ಮತ್ತೆ ವಿವಾದಾತ್ಮಕ ಹೇಳಿಕೆ ಕೊಟ್ಟ ಮಾಜಿ ಸಿಎಂ
ತುಮಕೂರು, ಎ.20: ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆಯರ ಕುಟುಂಬದ ಪುರುಷರು ಕುಡುಕರು ಎಂಬಂತಹ ಹೇಳಿಕೆ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.
ಮಧುಗಿರಿಯಲ್ಲಿ ಎನ್ ಡಿಎ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕುಮಾರಸ್ವಾಮಿ, "ಇವತ್ತು ಏನ್ ನಮ್ಮ ತಾಯಂದಿರಿಗೆ 2,000 ಕೊಡ್ತಿದ್ದಾರೆ. ನಿಮ್ಮ ಕುಟುಂಬದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ದುಡಿದು ಬರುವ ಯಜಮಾನ್ರು ಇತ್ತೀಚೆಗೆ 100ಕ್ಕೆ 80ರಿಂದ 90 ಭಾಗ ಕುಡಿಯುವುದಕ್ಕೆ(ಮದ್ಯ ಸೇವನೆ) ಬಳಸುತ್ತಿದ್ದಾರೆ. ಹಿಂದೆ ಸಂಜೆ ಸ್ನೇಹಿತರ ಜೊತೆ ಹೋದ್ರೆ 25 ರೂಪಾಯಿನಲ್ಲಿ ಮುಗಿಸಿಕೊಂಡು ಬರುತ್ತಿದ್ದರು. ಈಗ ಸಣ್ಣ ಬಾಟಲ್ ಗೆ 250, 300 ರೂ. ಕೊಡಬೇಕು. ಅಂದರೆ ತಿಂಗಳಿಗೆ ಐದಾರು ಸಾವಿರ ರೂ. ಆಗುತ್ತದೆ. ಅಂದರೆ ನಿಮ್ಮಿಂದ ವಸೂಲಿ ಮಾಡ್ತಾ ಇದ್ದಾರೆ ಅಂತಾ ನಾನು ಹೇಳ್ತಿಲ್ಲ. ಇದು ಪಿಕ್ ಪಾಕೆಟ್ ಸರಕಾರ, ನಿಮ್ಮ ಜೇಬಿನಿಂದ ಪಿಕ್ ಪಾಕೆಟ್ ಮಾಡ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಕುಮಾರಸ್ವಾಮಿ ಇತ್ತೀಚೆಗೆ 'ಗ್ಯಾರಂಟಿಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ' ಎಂಬ ಹೇಳಿಕೆಯ ಮೂಲಕ ವಿವಾದಕ್ಕೆ ಕಾರಣವಾಗಿದ್ದರು.