ತುಮಕೂರು | ಬಸ್ ನಿಲ್ದಾಣದಲ್ಲಿನ ಶೌಚಗುಂಡಿಯನ್ನು ದಲಿತ ಬಾಲಕನಿಂದ ಸ್ವಚ್ಚಗೊಳಿಸಿದ ಸಿಬ್ಬಂದಿ!
ಬಸ್ ನಿಲ್ದಾಣದಲ್ಲಿನ ಶೌಚಗುಂಡಿಯನ್ನು ದಲಿತ ಬಾಲಕನಿಂದ ಸ್ವಚ್ಚಗೊಳಿಸಿದ ಸಿಬ್ಬಂದಿ
ತುಮಕೂರು : ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿನ ಶೌಚಗುಂಡಿಯಲ್ಲಿ ತುಂಬಿ ಹರಿಯುತ್ತಿದ್ದ ಮಲವನ್ನು ದಲಿತರಿಂದ ಸ್ವಚ್ಚಗೊಳಿಸಿರುವ ಅಮಾನವೀಯ ಘಟನೆ ಗೃಹ ಸಚಿವ ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರ ಕೊರಟಗೆರೆಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನಿಲ್ದಾಣದ ಒಳಗಿರುವ ಸಾರ್ವಜನಿಕ ಶೌಚಾಲಯದ ಗುಂಡಿ ತುಂಬಿ ಹರಿಯುತ್ತಿದನ್ನು ದಲಿತರಿಂದ ಸ್ವಚ್ಚಗೊಳಿಸುವ ಕೆಲಸ ಮಾಡಿಸಲಾಗಿದೆ. ತುಮಕೂರು ಮೂಲದ ಪರಿಶಿಷ್ಟ ಜಾತಿಗೆ ಸೇರಿದ 10 ವರ್ಷದ ಬಾಲಕಾರ್ಮಿಕ ಹಾಗೂ ಓರ್ವ ವ್ಯಕ್ತಿ ನಿಲ್ದಾಣದಲ್ಲಿ ಮಲವನ್ನು ಸ್ವಚ್ಚಗೊಳಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸರೆಯಾಗಿದೆ.
ದಲಿತರಿಂದ ಮಲ ಸ್ವಚ್ಚಗೊಳಿಸುವ ಕೆಲಸ ಮಾಡಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಿಬ್ಬಂದಿ ಮಾಧ್ಯಮದವರನ್ನು ಕಂಡ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆ. ಮಾಧ್ಯಮದವರು ಬಾಲಕನನ್ನು ಮಾತನಾಡಿಸಿದ್ದು, "ಶೌಚಾಲಯದ ನಿರ್ವಹಣೆ ಮಾಡುತ್ತಿದ್ದ ಕುಮಾರಣ್ಣ ಎಂಬುವರು ನಮಗೆ ಈ ಕೆಲಸ ಮಾಡುವಂತೆ ಹೇಳಿದ್ದಾರೆ, ನಾನು ಪರಿಶಿಷ್ಟ ಜಾತಿಗೆ ಸೇರಿದ್ದು ತನಗೆ 10 ವರ್ಷ ವಯಸ್ಸು" ಎಂದು ಬಾಲಕ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ಮಾಧ್ಯಮದವರ ಜೊತೆಗೆ ಮಾತನಾಡುತ್ತಿದ್ದ ಬಾಲಕನಿಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಿಬ್ಬಂದಿ ದೂರದಿಂದಲೇ ಕೈಸನ್ನೆ ಮಾಡಿ ಮಾತನಾಡದಂತೆ ಹೇಳಿದ್ದು, ಕೂಡಲೇ ಬಾಲಕ ಕೆಲಸ ಮಾಡಲು ಬಳಸುತ್ತಿದ್ದ ಗುದ್ದಲಿ, ತೆಗೆದುಕೊಂಡು ಅಲ್ಲಿಂದ ಶೌಚಾಲಯದ ಕಡೆ ತೆರಳಿದ್ದಾನೆ ಎನ್ನಲಾಗಿದೆ.
ಪಟ್ಟಣ ಪಂಚಾಯ್ತಿಯಲ್ಲಿ ಇರುವ ಸೆಪ್ಟಿಕ್ ಟ್ಯಾಂಕ್ ಯಂತ್ರದ ಮೂಲಕ ತುಂಬಿದ ಶೌಚಗುಂಡಿಯನ್ನು ಸ್ವಚ್ಚಗೊಳಿಸದೇ ನಿಲ್ದಾಣದ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ. ಶೌಚಗುಂಡಿ ತುಂಬಿ ನಿಲ್ದಾಣದ ಫ್ಲಾಟ್ ಫಾರಂಗೆ ಹರಿಯತೊಡಗಿದೆ. ಇದು ನಿಲ್ದಾಣದಲ್ಲಿ ದುರ್ನಾತ ಆವರಿಸಿ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಒಡಾಡುವಂತ ಪರಿಸ್ಥಿತಿ ಉಂಟುಮಾಡಿದೆ.