ತುಮಕೂರು | 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ
ತುಮಕೂರು :ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ನಿಂದ ಸಾಹಿತ್ಯದ ಮೂಲಕ ಎಲ್ಲರಿಗೂ ಸಮಾನ ಅವಕಾಶ, ಸಾಮಾಜಿಕ ನ್ಯಾಯ ದೊರೆಯಬೇಕೆಂಬ ಕನಸಿನೊಂದಿಗೆ 109 ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ಸಂಸ್ಥೆಯನ್ನು ಸ್ಥಾಪಿಸಿದ್ದರು, ಆದರೆ ಅದು ಇದುವರೆಗೂ ಈಡೇರಿಲ್ಲ ಎಂದು ಸಾಹಿತಿ ಮತ್ತು ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ತಿಳಿಸಿದ್ದಾರೆ.
ನಗರದ ಗಾಜಿನಮನೆಯಲ್ಲಿ ಕಸಾಪ ಆಯೋಜಿಸಿದ್ದ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು,109 ತುಂಬಿ 110ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂಸ್ಥೆಗೆ ಇದುವರೆಗೂ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಸಾಹಿತಿಗಳು ಅಧ್ಯಕ್ಷರಾಗಲು ಸಾಧ್ಯವಾಗಿಲ್ಲ. ಸಾಹಿತ್ಯ ಪರಿಷತ್ನಲ್ಲಿ ಸಾಮಾಜಿಕ ನ್ಯಾಯ ಮರೀಚಿಕೆಯಾಗಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ ?, 7 ಕೋಟಿ ಕನ್ನಡಿಗರಿರುವ ನಾಡಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಕೇವಲ 4.50 ಲಕ್ಷ ಮಾತ್ರ ಸದಸ್ಯರಿದ್ದಾರೆ. ಇಂದಿಗೂ ಕಸಾಪ ಸ್ತ್ರೀಸಾಮಾನ್ಯರ ಪರಿಷತ್ ಆಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕನ್ನಡ ಮಾತೃಭಾಷೆಯಾದ ಕರ್ನಾಟಕದ ರಾಜ್ಯಧಾನಿ ಬೆಂಗಳೂರಿಗೆ ಬಸವಣ್ಣ, ಕುವೆಂಪು ಪ್ರತಿಮೆಗಳು ಕಾಲಿಡುವ ಮೊದಲೇ ಕನ್ನಡ ವಿರೋಧಿ ಶಿವಾಜಿ ಅವರ ಪ್ರತಿಮೆ ಆನಾವರಣಗೊಂಡಿತ್ತು. ಕನ್ನಡ ನಾಡಿಗೆ ಸಂಬಂಧವೇ ಇಲ್ಲದ ತಿರುವಳ್ಳರ ಪ್ರತಿಮೆ ಸ್ಥಾಪಿಸಲ್ಪಟ್ಟಿತ್ತು. 60-70 ದಶಕದಲ್ಲಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದರೆ ಹಲ್ಲೆ ಮಾಡುವ ಪರಿಸ್ಥಿತಿ ಇತ್ತು.ಆದರೆ ಕನ್ನಡ ಚಳವಳಿಗಳು ಹುಟ್ಟಿಕೊಂಡ ನಂತರ ಕಾಲ ಬದಲಾಗಿದೆ. ತೆಲಗು ಮಯವಾಗಿದ್ದ ಬಳ್ಳಾರಿಯಲ್ಲಿ, ಕೋಲಾರ ಜಿಲ್ಲೆಯಲ್ಲಿ ಕನ್ನಡ ಭಾಷೆ ಬೆಳೆದಿದೆ. ಆದರೆ ಎಂದಿಗೂ ಕಸಾಪ ಕನ್ನಡ ನೆಲ, ಜಲದ ಬಗ್ಗೆ ಪ್ರತಿಭಟನೆಗೆ ಇಳಿಯಲೇ ಇಲ್ಲ ಎಂದರು.
ಕೆಲ ಅಧ್ಯಕ್ಷರು ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನವನ್ನು ಮಜಾ ಮಾಡುವ ಹುದ್ದೆ ಎಂದು ಕೊಂಡಿದ್ದಾರೆ. ಅಖಿಲ ಭಾರತ ಕನ್ನಡ ಸಮ್ಮೇಳನ ನಡೆಸುವುದಷ್ಟೇ ಅವರ ಗುರಿಯಾಗಿದೆ, ಒಂದು ಮಾಡುವ ಬದಲು ಒಡಕು ಮೂಡಿಸಲೇ ಯತ್ನಿಸಿದ ಉದಾಹರಣೆಗಳಿವೆ. ಕನ್ನಡ ನೆಲ, ಜಲ, ಭಾಷೆ, ಗಡಿ ವಿಚಾರಕ್ಕೆ ಎಂದು ತಲೆ ಕಡೆಸಿಕೊಳ್ಳದವರನ್ನು ಸಮ್ಮೇಳಾನಾಧ್ಯಕ್ಷ ರನ್ನಾಗಿ ಮಾಡುವ ಹುನ್ನಾರ ನಡೆಸಿದ್ದರು. ನಮ್ಮೆಲ್ಲರ ವಿರೋಧದ ಫಲವಾಗಿ ಅದು ಕೈಗೂಡಲಿಲ್ಲ ಎಂದು ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ಕೇಡರ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ಕನ್ನಡ ಭಾಷೆಯನ್ನು ಸಾಕಷ್ಟು ಕಲಿತಿದ್ದೇನೆ. ಯಾವುದೇ ವಿಚಾರವನ್ನು ಮೊದಲು ಕನ್ನಡ ಭಾಷೆಯಲ್ಲಿಯೇ ಯೋಚಿಸುವಂತಾಗಿದೆ. 2 ದಿನಗಳ ಈ ಸಮ್ಮೇಳನದಲ್ಲಿ ಮಂಡನೆಯಾಗಿರುವ ವಿಚಾರಗಳು ಜಿಲ್ಲೆಯ ಅಭಿವೃದ್ದಿಗೆ ಪೂರಕವಾಗಲಿ, ಜಿಲ್ಲೆಯ ಬೆಳವಣಿಗೆಗೆ ಸಹಕಾರಿಯಾಗಲಿ ಎಂದರು.
ಶಾಸಕರಾದ ಜೋತಿಗಣೇಶ್ ಮಾತನಾಡಿ, ವ್ಯವಹಾರಿಕ ಭಾಷೆಯಾದ ಇಂಗ್ಲಿಷ್ ವ್ಯಾಮೋಹಕ್ಕೆ ಕನ್ನಡ ನಿರ್ಲಕ್ಷಕ್ಕೆ ಒಳಗಾಗಬಾರದು. ಕೇಂದ್ರದ ಐದು ಟ್ರಿಲಿಯನ್ ಎಕಾನಮಿಯಲ್ಲಿ ಕನ್ನಡಿಗರ ಪಾಲು ಪಡೆಯುವಂತಾಗಬೇಕೆಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಾಹಿತ್ಯ ವಾಸ್ತವದ ಪ್ರತಿಬಿಂಬ ಆಗಬೇಕು. ಇಂದು ಕೃಷಿಯಿಂದ ಯುವಕರು ವಿಮುಖರಾಗಿ ನಗರದತ್ತ ಮುಖ ಮಾಡಿದ್ದಾರೆ. ವರ್ಷಕ್ಕೆ ಕೋಟಿ ರೂ. ದುಡಿದರೂ ಕೃಷಿಕನಿಗೆ ಹೆಣ್ಣು ಸಿಗುವುದು ಕಷ್ಟವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಆಹಾರಕ್ಕೆ ಹಾಹಾಕಾರ ಉಂಟಾಗಲಿದೆ. ಜಿಲ್ಲೆಯ ನೀರಾವರಿಗೆ ಹೆಚ್ಚಿನ ಅದ್ಯತೆ ನೀಡಬೇಕಾಗಿದೆ ಎಂದರು.
ಸಮ್ಮೇಳನದ ಮೂರು ನಿರ್ಣಯಗಳು :
ತುಮಕೂರು ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಕಲಾ ಗ್ರಾಮ ನಿರ್ಮಾಣ.
ಮುಚ್ಚುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳುವುದು.
ತುಮಕೂರು ಸಮೀಪದ ಹೊನ್ನೇನಹಳ್ಳಿಯಲ್ಲಿ ದೊರೆತಿರುವ ಶ್ರೀ ಕೃಷ್ಣದೇವರಾಯನ ಕುರಿತ ಶಿಲಾ ಶಾಸನ ರಕ್ಷಣೆಗೆ ಅಗತ್ಯ ಕ್ರಮ.
ಕಲಾ ಗ್ರಾಮಕ್ಕೆ ಸಿ.ಬಿ.ಮಲ್ಲಪ್ಪ ಅವರ ಹೆಸರಿಡುವಂತೆ ರವಿಕುಮಾರ್ ಮನವಿ ಮಾಡಿದರು.
ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕೋಶಾಧ್ಯಕ್ಷರಾದ ಎಂ.ಎಚ್.ನಾಗರಾಜು, ಗೌರವ ಕಾರ್ಯದರ್ಶಿ ಡಾ.ಡಿ.ಎನ್.ಯೋಗೀಶ್ವರಪ್ಪ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಶಿರಿವರ,ರಾಣಿ ಚಂದ್ರಶೇಖರ್, ಚಾಂದ್ ಪಾಷ, ಕಂಟಲಗೆರೆ ಸಣ್ಣಹೊನ್ನಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವೇದಿಕೆಯಿಂದ ಸಮ್ಮೇಳನಾಧ್ಯಕ್ಷರಾದ ಡಾ.ಅಗ್ರಹಾರ ಕೃಷ್ಣಮೂರ್ತಿ ದಂಪತಿಗಳನ್ನು ಗೌರವಿಸಲಾಯಿತು.ಇವರೊಂದಿಗೆ 33 ಜನ ವಿವಿಧ ಕ್ಷೇತ್ರದ ಗಣ್ಯರನ್ನು ಅಭಿನಂದಿಸಲಾಯಿತು.