ತುಮಕೂರು | ಎತ್ತಿನಹೊಳೆ ನಾಲೆ ಕಾಮಗಾರಿ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಮೃತ್ಯು
ತುಮಕೂರು: ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಸಂಬಂಧಿಸಿ ಅಗೆದಿರುವ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟ ಘಟನೆ ತಿಪಟೂರು ತಾಲೂಕಿನ ಹುಚ್ಚನಹಟ್ಟಿ ಗ್ರಾಮದ ಸಮೀಪ ನಡೆದಿದೆ.
ಹುಚ್ಚನಹಟ್ಟಿ ಗ್ರಾಮದ ಯದುವೀರ್ (8) ಮತ್ತು ಮನೋಹರ್ (10) ಮೃತಪಟ್ಟ ಬಾಲಕರು.
ಗುರುವಾರ ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ ಇವರಿಬ್ಬರು ಬಳಿಕ ಹೊರಗಡೆ ಹೋದವರು ವಾಪಸ್ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಳಿಕ ತಿಪಟೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಇಂದು ಬೆಳಗ್ಗೆ ಮತ್ತೆ ಹುಡುಕಾಡಿದಾಗ ಇಬ್ಬರು ಬಾಲಕರ ಮೃತದೇಹಗಳು ನಗರಕ್ಕೆ ಹೊಂದಿಕೊಂಡಿರುವ ಹುಚ್ಚನಹಟ್ಟಿ ಗ್ರಾಮದ ಬಳಿ ಎತ್ತಿನಹೊಳೆ ನೀರಾವರಿ ಯೋಜನೆಯ ಕಾಮಗಾರಿಗೆ ತೆಗೆದಿದ್ದ ಗುಂಡಿಯಲ್ಲಿ ಪತ್ತೆಯಾಗಿವೆ.
ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿರುವ ಹುಚ್ಚನಹಟ್ಟಿಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಈ ಸ್ಥಳಕ್ಕೆ ಸಂಜೆ ವೇಳೆ ಹೋಗಿದ್ದ ಮಕ್ಕಳು ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಈ ಬಗ್ಗೆ ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.