ಒಳಮೀಸಲಾತಿ ಜಾರಿ ಮಾಡಿಯೇ ತೀರುತ್ತೇವೆ: ಗೃಹ ಸಚಿವ ಜಿ. ಪರಮೇಶ್ವರ್

ತುಮಕೂರು: ತುಮಕೂರು ಮಹಾನಗರ ಪಾಲಿಕೆ ಆವರಣದ ಟೌನ್ ಹಾಲ್ ಐತಿಹಾಸಿಕ ಕಟ್ಟಡದ ಮುಂಭಾಗದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆ ಸ್ಥಾಪಿಸಲು ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ರವರು ಹೇಳಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರ ಜಯಂತಿ ಆಚರಣೆ ಕುರಿತಂತೆ ವಿವಿಧ ದಲಿತಪರ ಸಂಘಟನೆಗಳೊಂದಿಗೆ ಜಿಲ್ಲಾಧಿಕಾರಿಯವರ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ ಬಳಿಕ ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅನೇಕ ಜಿಲ್ಲೆಗಳಲ್ಲಿ ಅಂಬೇಡ್ಕರ್ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಹಾಗೂ ಬಾಬು ಜಗಜೀವನ್ ರಾಮ್ ಪ್ರತಿಮೆ ಇಡಲು ಮುಂದಾದಾಗ ಕಾನೂನಾತ್ಮಕವಾಗಿ ಅನೇಕ ಅಡಚಣೆಗಳು ಬಂದಿವೆ. ಕ್ಯಾಬಿನೆಟ್‌ನಿಂದ ಅನುಮೋದನೆ ಪಡೆಯಲಾಗಿದೆ. ಸರ್ಕಾರ ತೀರ್ಮಾನಿಸಿರುವುದರಿಂದ ಇದಕ್ಕೆ ಯಾರ ವಿರೋಧ ಬರುವುದಿಲ್ಲ. 39 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ರವರ ಕಂಚಿನ ಪ್ರತಿಮೆಯನ್ನು ಸಿದ್ಧಪಡಿಸಲಾಗಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಈ ಬಾರಿಯ ಅಂಬೇಡ್ಕರ್ ರವರ ಜಯಂತಿ ಅದ್ಧೂರಿಯಾಗಿ ಆಚರಿಸಬೇಕಿದೆ. ವಿವಿಧ ಕಲಾತಂಡಗಳನ್ನು ಆಹ್ವಾನಿಸಲಾಗುವುದು. ರಾಜ್ಯದ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುವಂತಹ ಕಾರ್ಯಕ್ರಮ ರೂಪಿಸಲಾಗುವುದು. ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯಕ್ರಮ ನಡೆಸಬೇಕಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕುರಿತು ಮುಂದಿನ ಪೀಳಿಗೆವರೆಗು ಸಂದೇಶಗಳನ್ನು ತಲುಪಿಸಬೇಕು. ಅಂಬೇಡ್ಕರ್ ಪ್ರತಿಮೆ ಬಳಿ ಸಂವಿಧಾನ ಪೂರ್ವಪೀಠಿಕೆಯ ಶಿಲೆಯನ್ನು ಸ್ಥಾಪಿಸಲಾಗುವುದು ಎಂದರು.
ನೆನೆಗುದಿಗೆ ಬಿದ್ದಿರುವ ಬಾಬು ಜಗಜೀವನ್ ರಾಮ್ ಅವರ ಭವನ ನಿರ್ಮಾಣದ ಸಮಸ್ಯೆಯನ್ನು ಬಗೆಹರಿಸಲಾಗುವುದು. ಈ ಬಗ್ಗೆ ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು. ಬಾಬು ಜಗಜೀವನ್ ರಾಮ್ ರವರ ಪ್ರತಿಮೆಯನ್ನು ನಾನೇ ನಿರ್ಮಿಸಿ ಕೊಡುತ್ತೇನೆ. ಮೂರು ತಿಂಗಳಿಗೊಮ್ಮೆ ಪರಿಶಿಷ್ಟ ಸಮುದಾಯಗಳೊಂದಿಗೆ ಕುಂದು-ಕೊರತೆಯ ಸಭೆಯನ್ನು ನಾನೇ ಖುದ್ದಾಗಿ ನಡೆಸುತ್ತೇನೆ ಎಂದು ಹೇಳಿದರು.
ನಮ್ಮ ಪಕ್ಷದ ಚುನಾವಣೆ ಪ್ರಣಾಳಿಕೆ ಬರೆದದ್ದು ನಾನು. ಚಿತ್ರದುರ್ಗದಲ್ಲಿ ಎಸ್‌ಸಿ, ಎಸ್‌ಟಿ ಸಮಾವೇಶ ಮಾಡಲಾಯಿತು. ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಬರೆಯಲಾಯಿತು. ಲಂಬಾಣಿ, ಭೋವಿ ಸಮುದಾಯಗಳನ್ನು ಒಪ್ಪಿಸಿ, ಈ ಬಗ್ಗೆ ಸಮಾವೇಶದಲ್ಲಿ ಮಾತನಾಡಲಾಯಿತು. ಒಳ ಮೀಸಲಾತಿ ಜಾರಿಯ ಕುರಿತು ವಿಪಕ್ಷಗಳು ತಮ್ಮದೆ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನನ್ನ ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.
ಅಧಿಕೃತವಾದ ಜನಸಂಖ್ಯೆಯ ಆಧಾರದ ಮೇಲೆ ಒಳಮೀಸಲಾತಿ ಜಾರಿ ಮಾಡಬೇಕು. 2011ರಲ್ಲಿ ಜನ ಗಣತಿ ನಡೆಸಿಲ್ಲ. ಸದಾಶಿವ ಆಯೋಗದ ವರದಿ ಆಧರಿಸಿ ಒಳಮೀಸಲಾತಿ ಜಾರಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಬಗ್ಗೆ ಕ್ಯಾಬಿನೆಟ್‌ನಲ್ಲಿ ಹತ್ತಾರು ಬಾರಿ ಚರ್ಚಿಸಲಾಗಿದೆ. ನಾನೇ ನಾಲ್ಕೈದು ಬಾರಿ ಎಸ್‌ಸಿ ಸಮುದಾಯಗಳ ಮುಖಂಡರ ಸಭೆ ನಡೆಸಿದ್ದು, ಅಂತಿಮವಾಗಿ ಎಲ್ಲರು ಒಪ್ಪಿದ್ದಾರೆ ಎಂದು ತಿಳಿಸಿದರು.
ಒಳ ಮೀಸಲಾತಿ ಜಾರಿಗೊಳಿಸುವುದು ಅಂತಿಮ ಹಂತಕ್ಕೆ ಬಂದಿದೆ. ಒಳ ಮೀಸಲಾತಿ ಜಾರಿಯಾದರೆ ಕಾನೂನು ಸಮಸ್ಯೆಗಳು ಎದುರಾಗಬಾರದು ಎಂಬ ನಿಟ್ಟಿನಲ್ಲಿ ನಾಗಮೋಹನ್ ದಾಸ್ ರವರು ಕೆಲಸ ಮಾಡುತ್ತಿದ್ದಾರೆ. ಸಚಿವರಾದ ಎಚ್.ಸಿ.ಮಹದೇವಪ್ಪ ಅವರ ನಿವಾಸದಲ್ಲಿ ತಡರಾತ್ರಿವರೆಗೂ ಚರ್ಚಿಸಿದ್ದೇವೆ. ಒಳ ಮೀಸಲಾತಿಯನ್ನು ಜಾರಿ ಮಾಡಿಯೇ ತೀರುತ್ತೇವೆ ಎಂದು ಸಚಿವ ಪರಮೇಶ್ವರ್ ಅವರು ಹೇಳಿದರು.
ಕಳೆದ ಇಪ್ಪತ್ತು ದಿನದ ಹಿಂದೆ ಜಾತಿಗಣತಿ ವರದಿಯನ್ನು ಕ್ಯಾಬಿನೆಟ್‌ನಲ್ಲಿ ತರಲು ಕಾರ್ಯಸೂಚಿಯಲ್ಲಿತ್ತು. ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಜಾತಿಗಣತಿ ವರದಿ ಜಾರಿಯಾದರೆ ಒಳ ಮೀಸಲಾತಿ ಜಾರಿಗೊಳಿಸಲು ಅನುಕೂಲವಾಗುತ್ತದೆ. ಒಳ ಮೀಸಲಾತಿ ಜಾರಿಗೊಳಿಸುವ ಬಗ್ಗೆ ಯಾವುದೇ ರೀತಿಯ ಆತಂಕಪಡುವುದು ಬೇಡ ಎಂದು ತಿಳಿಸಿದರು.
ಒಳ ಮೀಸಲಾತಿ ಜಾರಿಗಾಗಿ ನಡೆಯುವ ಪ್ರತಿಭಟನೆ ವೇಳೆ ಯಾರ ಬಗ್ಗೆಯೂ ಲಘುವಾಗಿ ಮಾತನಾಡಬೇಡಿ. ಬಾಯಿಗೆ ಬಂದಂತೆ ಮಾತಾಡುವುದು ಸರಿಯಲ್ಲ ಎಂದರು.