ಉಡುಪಿ: ಡಿ.1ರಂದು ವಿಶ್ವ ಏಡ್ಸ್ ದಿನಾಚರಣೆ; ಜಾಥಾ, ಜಾಗೃತಿ ಕಾರ್ಯಕ್ರಮ
ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಉಡುಪಿ ಜಿಲ್ಲೆಯ ವಿವಿಧ ಇಲಾಖೆ ಹಾಗೂ ಸಂಘಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಏಡ್ಸ್ ದಿನ-2024ನ್ನು ಡಿ.1ರಂದು ಉಡುಪಿಯಲ್ಲಿ ಆಯೋಜಿಸಿದೆ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ. ಗಡಾದ್ ತಿಳಿಸಿದ್ದಾರೆ.
ಅಜ್ಜರಕಾಡಿನ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಸರಿಯಾದ ಮಾರ್ಗದಲ್ಲಿ ಹಕ್ಕುಗಳನ್ನು ಪಡೆಯೋಣ, ನನ್ನ ಆರೋಗ್ಯ ನನ್ನ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಏಡ್ಸ್ ದಿನಾಚರಣೆ ಯನ್ನು ಜಾಥಾ ಹಾಗೂ ಜಾಗೃತಿ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ ಎಂದರು.
ಬೆಳಗ್ಗೆ 9ಗಂಟೆಗೆ ಏಡ್ಸ್ ದಿನದ ಜಾಥಾ ಕಾರ್ಯಕ್ರಮವನ್ನು ಬೆಳಗ್ಗೆ 9ಗಂಟೆಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪಿ.ಆರ್.ಯೋಗೀಶ್ ಅವರು ನಗರದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಉದ್ಘಾಟಿಸಲಿದ್ದಾರೆ ಎಂದರು.
ಏಡ್ಸ್ ಜಾಗೃತಿ ಜಾಥಾವು ಬೋರ್ಡ್ ಹೈಸ್ಕೂಲ್‌ನಿಂದ ಕೆ.ಎಂ. ಮಾರ್ಗವಾಗಿ ಅಂಬಲಪಾಡಿಯಲ್ಲಿರುವ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆಯವರೆಗೆ ಸಾಗಿ ಬರಲಿದೆ. ಬಳಿಕ ಸಂಘದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಡಾ.ಗಡಾದ್ ತಿಳಿಸಿದರು.
ಸಭಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಉದ್ಘಾಟಿಸಲಿದ್ದಾರೆ. ಜಿಪಂನ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಪ್ರತೀಕ್ ಬಾಯಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಪಿ.ಆರ್.ಯೋಗೀಶ್, ಮೈಸೂರು ವಿಭಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ವಿಭಾಗೀಯ ಉಪನಿರ್ದೇಶಕ ಡಾ.ಮಲ್ಲಿಕಾ ಬಿ., ಜಿಲ್ಲಾ ಸರ್ಜನ್ ಡಾ.ಅಶೋಕ್, ಎಸ್‌ಕೆಆರ್‌ಡಿಸಿ ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಉಡುಪಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸು ವರು ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಎಚ್‌ಐವಿ ಹಾಗೂ ಏಡ್ಸ್ ಕುರಿತು ವಿಏಸಷ ಉಪನ್ಯಾಸ ನೀಡಲಿದ್ದಾರೆ. ಅಲ್ಲದೇ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ ಎಂದು ಡಾ.ಗಡಾದ್ ತಿಳಿಸಿದರು.
ಜಿಲ್ಲೆಯಲ್ಲಿ ಏಡ್ಸ್ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ತಿಳಿಸಿದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಜಿಲ್ಲೆಯಲ್ಲಿ ಏಡ್ಸ್ ಪಾಸಿಟಿವಿಟಿ ದರ ಶೇ.0.20ಗೆ ಇಳಿದಿದ್ದು, ಗರ್ಭಿಣಿಯಲ್ಲಿ ಏಡ್ಸ್ ಪಾಸಿಟ್ ಕಂಡು ಬರುವ ಪ್ರಮಾಣ ಶೇ.0.01ಕ್ಕೆ ಇಳಿದಿದೆ ಎಂದರು.
2024-25ನೇ ಸಾಲಿನಲ್ಲಿ ಅಕ್ಟೋಬರ್ ತಿಂಗಳ ಕೊನೆಯವರೆಗೆ ಒಟ್ಟು 58,839 ಮಂದಿಯನ್ನು ಏಡ್ಸ್ ಪರೀಕ್ಷೆಗೊಳಪಡಿ ಸುವ ಮೂಲಕ ಶೇ.77 ಸಾಧನೆ ಮಾಡಲಾಗಿದೆ. ಇವರಲ್ಲಿ 126 (ಶೇ.0.20) ಮಾತ್ರ ಎಚ್‌ಐವಿ ಪಾಸಿಟಿವ್ ಕಂಡುಬಂದಿದ್ದಾರೆ ಎಂದರು.
ಜಿಲ್ಲೆಯ 4306 ಮಂದಿಯಲ್ಲಿ ಎಚ್‌ಐವಿ ವೈರಸ್
ಜಿಲ್ಲೆಯಲ್ಲಿ ಸದ್ಯಕ್ಕೆ ಒಟ್ಟು 4306 ಮಂದಿ ಎಚ್‌ಐವಿ ವೈರಸ್‌ನೊಂದಿಗೆ ಬದುಕುತಿದ್ದಾರೆ. ಇವರು ಜಿಲ್ಲೆಯ ಎಆರ್‌ಟಿ ಕೇಂದ್ರ ಗಳಲ್ಲಿ ನಿರಂತರ ಚತಿಕ್ಸೆ ಪಡೆಯುತಿದ್ದಾರೆ. ಈ ವರ್ಷ ಎಚ್‌ಐವಿ ಪಾಸಿಟಿವ್ ಕಂಡುಬಂದ 126 ಮಂದಿಯಲ್ಲಿ 42 ಮಂದಿ ಹೊರಜಿಲ್ಲೆಯವರು ಹಾಗೂ ಸಾಕಷ್ಟು ಮಂದಿ ಕೆಎಂಸಿ ಮಣಿಪಾಲದಲ್ಲಿ ಚಿಕಿತ್ಸೆಗೆಂದು ಬಂದು ಪರೀಕ್ಷೆ ವೇಳೆ ರೋಗ ಪತ್ತೆ ಯಾದವರು ಸೇರಿದ್ದಾರೆ ಎಂದು ಡಾ.ಗಡಾದ್ ಹಾಗೂ ಡಾ.ಸಂಜು ತಿಳಿಸಿದರು.
ಜಿಲ್ಲೆಯಲ್ಲಿ 2016ರಿಂದ ಎಚ್‌ಐವಿ ಸೋಂಕಿತ ಗರ್ಭಿಣಿಯರಿಂದ ಮಗುವಿಗೆ ಸೋಂಕು ವರ್ಗಾವಣೆಯಾದ ಯಾವುದೇ ಪ್ರಕರಣಗಳಿಲ್ಲ. ಜಿಲ್ಲೆ ಯಲ್ಲಿ ಅನುಸರಿಸುತ್ತಿರುವ ರೋಗ ಪತ್ತೆ, ನಿರಂತರ ಚಿಕಿತ್ಸೆಯ ಕಾರ್ಯ ವಿಧಾನಗಳಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಈ ವರ್ಷ 10,197 ಗರ್ಭಿಣಿಯರನ್ನು ಪರೀಕ್ಷೆಗೊಳಪಡಿಸಿದ್ದು ಕೇವಲ ಒಬ್ಬರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ.
ಜಿಲ್ಲೆಯಲ್ಲಿ 2022-23ರಲ್ಲಿ 88, 2023-34ನೇ ಸಾಲಿನಲ್ಲಿ 145 ಮಂದಿ ಹಾಗೂ 2024-25ರಲ್ಲಿ ಅಕ್ಟೋಬರ್‌ವರೆಗೆ 55 ಮಂದಿ ಎಚಐವಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಡಾ.ಸಂಜು ವಿವರಿಸಿದರು.