ಕಾರ್ಗೋ ಶಿಪ್‌ನಲ್ಲಿ ಬೆಂಕಿ: 10ನೇ ದಿನ ಪ್ರವೇಶಿಸಿದ ‘ಆಪರೇಷನ್ ಸಹಾಯತಾ’
ಉಡುಪಿ, ಜು.28: ಗುಜರಾತ್‌ನಿಂದ ಶ್ರೀಲಂಕಾದ ಕೊಲಂಬೊಗೆ ಅತ್ಯಂತ ದಹನಕಾರಿ ಘನ ಹಾಗೂ ದ್ರವ ವಸ್ತುಗಳನ್ನು ಸಾಗಿಸುತಿದ್ದ ಬೃಹತ್ ಕಾರ್ಗೋ ಕಂಟೈನರ್ ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸುವ ಭಾರತೀಯ ಕೋಸ್ಟ್ ಗಾರ್ಡ್‌ನ (ಐಸಿಜಿ) ‘ಆಪರೇಷನ್ ಸಹಾಯತಾ’ ಇಂದು ಹತ್ತನೇ ದಿನದಲ್ಲಿ ಮುಂದುವರಿದಿದ್ದು, ಬೆಂಕಿಯನ್ನು ಸಂಪೂರ್ಣ ವಾಗಿ ಆರಿಸುವ ಹಾಗೂ ತೈಲ ಸೋರಿಕೆ ಮತ್ತು ಪರಿಸರ ಮಾಲಿನ್ಯದಿಂದ ರಾಜ್ಯ ಕರಾವಳಿಯನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ ಎಂದು ಐಸಿಜಿ ಇಂದು ‘ಎಕ್ಸ್’ (ಹಿಂದಿನ ಟ್ವಿಟರ್)ನಲ್ಲಿ ತಿಳಿಸಿದೆ.
ಜು.17ರಂದು ಗುಜರಾತ್‌ನ ಮುಂದ್ರಾ ಬಂದರಿನಿಂದ ಅಪಾಯಕಾರಿ ದಹನಕಾರಿ ವಸ್ತುಗಳನ್ನು ಹೇರಿಕೊಂಡು ಕೊಲಂಬೊಗೆ ಹೊರಟಿದ್ದ ಪನಾಮಾ ದೇಶದ ಫ್ಲ್ಯಾಗ್ ಹೊಂದಿರುವ ಎಂವಿ ಎಂ ಫ್ರಾಂಕ್‌ಫರ್ಟ್ ಹಡಗು ಎನ್‌ಎಂಪಿಟಿ ಬಂದರಿನಿಂದ 50 ನಾಟಿಕಲ್ ಮೈಲು ದೂರದಲ್ಲಿ ಆಳ ಸಮುದ್ರದಲ್ಲಿ ನಿಂತಿದೆ. ಬೆಂಕಿಯಿಂದ ಹಡಗು ಮುಳುಗುವ, ತೈಲ ಸೋರಿಕೆ ಮತ್ತು ಪರಿಸರ ಮಾಲಿನ್ಯದ ಸಾಧ್ಯತೆ ಹಿನ್ನೆಲೆಯಲ್ಲಿ ಅದನ್ನು ಬಂದರಿನಿಂದ ದೂರದಲ್ಲಿ ಇರಿಸಲಾಗಿದೆ.
ಐಸಿಜಿಯ ರಕ್ಷಣಾ ಹಡಗುಗಳಾದ ‘ಸಚೇತ್’, ‘ಸುಜೀತ್’, ‘ಸಾಮ್ರಾಟ್’ ‘ಸಮುದ್ರ ಪ್ರಹಾರಿ’ ಸೇರಿದಂತೆ ಐಸಿಜಿಯ ಐದು ಹಡಗುಗಳು, ಎರಡು ಹೆಲಿಕಾಫ್ಟರ್‌ಗಳು ಹಾಗೂ ಒಂದು ಡೋರ್ನಿಯರ್ ವಿಮಾನ ಬೆಂಕಿ ನಂದಿಸುವ ಕಾರ್ಯದಲ್ಲಿ ಕಳೆದ ಹತ್ತು ದಿನಗಳಿಂದ ಕಾರ್ಯನಿರತವಾಗಿವೆ. ಈವರೆಗೆ 1200 ಕೆ.ಜಿ. ಒಣ ರಾಸಾಯನಿಕ (ಡ್ರೈ ಕೆಮಿಕಲ್ಸ್)ವನ್ನು ಬಳಸಲಾ ಗಿದೆ ಎಂದು ಕೋಸ್ಟ್ ಗಾರ್ಡ್ ಎಕ್ಸ್‌ನಲ್ಲಿ ವಿವರಿಸಿದೆ.
ಹಡಗಿನಲ್ಲಿ ಒಟ್ಟು 21 ಮಂದಿ ಸಿಬ್ಬಂದಿಗಳಿದ್ದು, ಇವರಲ್ಲಿ ಫಿಲಿಫೈನ್ಸ್‌ನ ಓರ್ವ ಸಿಬ್ಬಂದಿ ಬೆಂಕಿಯಿಂದ ಮೃತಪಟ್ಟಿರುವುದಾಗಿ ದೃಢ ಪಡಿಸಲಾಗಿದೆ. ಉಳಿದ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ ಎಂದು ಐಸಿಜಿ ತಿಳಿಸಿದೆ.
ಕಳೆದ ಜೂನ್ ತಿಂಗಳಿನಲ್ಲಷ್ಟೇ ನಿರ್ಮಾಣಗೊಂಡು ನೀರಿಗಿಳಿದಿದ್ದ ಎಂ.ಫ್ರಾಂಕ್‌ಫರ್ಟ್ ಕಾರ್ಗೋ ಶಿಪ್‌ನ ಮಾಲಕ ಜಪಾನಿನ ಟೊಕೈ ಕೊಯುನ್. ಹಾಂಗ್‌ಕಾಂಗ್‌ನ ಹಡಗು ನಿರ್ವಹಣಾ ಕಂಪೆನಿ ಇದರ ನಿರ್ವಹಣೆಯನ್ನು ಮಾಡುತ್ತಿತ್ತು ಎಂದು ‘ಮೆರಿಟೈಮ್ ಬೆಲ್’ ಹೇಳಿದೆ.
ಜು.17ರಂದು ಮುಂದ್ರಾ ಬಂದರಿನಿಂದ ಹೊರಟಿದ್ದ ಈ ಹಡಗಿನಲ್ಲಿ ಜು.19ರಂದು ಗೋವಾದಿಂದ ಕಾರವಾರದತ್ತ ಬರುತ್ತಿ ದ್ದಾಗ ಬೆಂಕಿ ಕಾಣಿಸಿ ಕೊಂಡಿತ್ತು. ತಕ್ಷಣವೇ ಇಂಡಿಯನ್ ಕೋಸ್ಟ್ ಗಾರ್ಡ್ ಬೆಂಕಿ ನಂದಿಸುವ ಹಾಗೂ ಹಡಗನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು. ಈ ನಡುವೆ ರಾಜ್ಯ ಕರಾವಳಿಯನ್ನು ಪ್ರವೇಶಿಸಿರುವ ಹಡಗನ್ನು ಎನ್‌ಎಂಪಿಟಿಗೆ ಸಮೀಪದಲ್ಲಿರುವಂತೆ ಅರಬಿಸಮುದ್ರದಲ್ಲಿ ನಿಲ್ಲಿಸಲಾಗಿದೆ.
ಮುಂದಿನ ನಡೆಯ ಬಗ್ಗೆ ನಿರ್ಧರಿಸಲು ‘ಹಡಗು ರಕ್ಷಣಾ ತಂಡ’ದ ತಜ್ಞರು ಸ್ಥಳಕ್ಕೆ ತೆರಳಿದ್ದು, ಈಗಾಗಲೇ ತಮ್ಮ ಪರಿಶೀಲನೆಯನ್ನು ಪೂರ್ಣಗೊಳಿಸಿದ್ದಾರೆ. ಅವರು ತಮ್ಮ ವರದಿಯನ್ನು ನಾಳೆಯೊಳಗೆ ನೀಡುವ ಸಾಧ್ಯತೆ ಇದ್ದು, ಅದರ ನಂತರ ಕಾರ್ಗೋ ಶಿಪ್‌ನ ಮುಂದಿನ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಮಲ್ಪೆಯ ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್ ಎಚ್.ಎನ್. ತಿಳಿಸಿದ್ದಾರೆ.
ಕಾರ್ಗೋ ಶಿಪ್‌ನಲ್ಲಿ ಇನ್ನೂ ಹೊಗೆಯಾಡುತ್ತಿರುವ ಮಾಹಿತಿ ಇದೆ. ಸದ್ಯ ಅದನ್ನು ಸಾಧ್ಯವಿರುವಷ್ಟು ಮಂಗಳೂರಿಗೆ ಸಮೀಪದಲ್ಲಿರುವಂತೆ 50 ನಾಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ನಿಲ್ಲಿಸಲಾಗಿದೆ.ಹಡಗನ್ನು ಮತ್ತೆ ಚಾಲೂ ಮಾಡಿ ಕೊಂಡೊಯ್ದರೆ ಬೆಂಕಿ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ತಜ್ಞರ ವರದಿಯ ಬಳಿಕ ಐಸಿಜಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಅಗತ್ಯ ಬಿದ್ದರೆ ಕಾರ್ಗೋ ಶಿಪ್‌ನ್ನು ಎಳೆದೊಯ್ಯಲು ಶಾರ್ಜಾದಿಂದ ಟಗ್ ಒಂದು ಇಲ್ಲಿಗೆ ಬರುತ್ತಿದೆ. ಬೆಂಕಿ ಮತ್ತೆ ಕಾಣಿಸಿ ಕೊಂಡರೆ ಹಡಗು ಮುಳುಗುವ, ತೈಲ ಸೋರಿಕೆಯಾಗುವ ಹಾಗೂ ಹಡಗಿನಲ್ಲಿರುವ ದಹನಕಾರಿ ವಸ್ತುಗಳಿಂದ ಕರಾವಳಿ ತೀರದಲ್ಲಿ ಪರಿಸರ ಮಾಲಿನ್ಯವಾಗುವ ಅಪಾಯವಿನ್ನೂ ದೂರ ವಾಗಿಲ್ಲ ಎಂದು ಕರಾವಳಿ ಕಾವಲು ಪಡೆ, ಕೋಸ್ಟ್ ಗಾರ್ಡ್‌ನ ಮೂಲಗಳು ತಿಳಿಸಿವೆ.
‘ಬೆಂಕಿ ಕಾಣಿಸಿಕೊಂಡಿರುವ ಕಾರ್ಗೋ ಶಿಪ್‌ನಲ್ಲಿ ಇನ್ನೂ ಹೊಗೆಯಾಡುತ್ತಿರುವ ಮಾಹಿತಿ ಇದೆ. ಮಂಗಳೂರು ಬಂದರಿಗೆ ಹತ್ತಿರದಲ್ಲಿರುವಂತೆ ಆಳ ಸಮುದ್ರದಲ್ಲಿ ಅದನ್ನು ನಿಲ್ಲಿಸಲಾಗಿದೆ. ತಜ್ಞರು ಹಾಗೂ ಸ್ಲಾವೇಜಿಂಗ್ ಟೀಮ್ (ರಕ್ಷಣಾ ತಂಡ) ಈಗಾಗಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಬೆಂಕಿಗೆ ಕಾರಣ ಹಾಗೂ ಪರಿಹಾರದ ಮಾರ್ಗವನ್ನು ಸೂಚಿಸಲಿದೆ. ಅದರಂತೆ ಮುಂದಿನ ಕ್ರಮ ಜರಗಲಿದೆ.’
-ಮಿಥುನ್ ಎಚ್.ಎನ್., ಮಲ್ಪೆ ಕರಾವಳಿ ಕಾವಲು ಪಡೆ ಎಸ್ಪಿ.