ಬಂಟ್ವಾಳದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಗೆ ‘ಪಾರ್ತಿಸುಬ್ಬ ಪ್ರಶಸ್ತಿ’; ಐವರು ಗೌರವ ಪ್ರಶಸ್ತಿ, 10 ಮಂದಿ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ
ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿ ಪ್ರಕಟ
ಮಾಂಬಾಡಿ ಸುಬ್ರಹ್ಮಣ್ಯ ಭಟ್, ಅಂಡಾಲ ದೇವಿಪ್ರಸಾದ್ ಶೆಟ್ಟಿ, ಅಡ್ಕ ಗೋಪಾಲಕೃಷ್ಣ ಭಟ್ಟ, ಉಮೇಶ್ ಕುಪ್ಪೆಪದವು, ಕರ್ಗಲ್ ವಿಶ್ವೇಶ್ವರ ಭಟ್, ಕಾಂತರಾಜು, ಕೃಷ್ಣಪ್ಪ, ಕೊಳ್ತಿಗೆ ನಾರಾಯಣ ಗೌಡ, ಕೋಡಿ ವಿಶ್ವನಾಥ ಗಾಣಿಗ, ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ, ಮವ್ವಾರು ಬಾಲಕೃಷ್ಣ ಮಣಿಯಾಣಿ, ಮುಗ್ವಾ ಗಣೇಶ ನಾಯ್ಕ್, ರಾಘವ ದಾಸ್, ಶಿವಾನಂದ ಗೀಜಗಾರು, ಸುಬ್ರಾಯ ಹೊಳ್ಳ, ಸುರೇಂದ್ರ ಮಲ್ಲಿ, ಹಳುವಳ್ಳಿ ಜ್ಯೋತಿ
ಉಡುಪಿ, ಜ.10:ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳು ಇಂದಿಲ್ಲಿ ಪ್ರಕಟಗೊಂಡಿದ್ದು, ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ತೆಂಕುತಿಟ್ಟಿನ ಪ್ರಸಿದ್ಧ ಹಿಮ್ಮೇಳ ವಾದಕರೂ, ಯಕ್ಷಗಾನ ಗುರುಗಳೂ ಆದ ಬಂಟ್ವಾಳದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಈ ಬಾರಿಯ ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾದ ಕರಾವಳಿಯ ಯಕ್ಷಗಾನ ಹಾಗೂ ಯಕ್ಷಗಾನ ಮೂಡಲಪಾಯ ಕಲಾವಿದರ ಹೆಸರುಗಳನ್ನು ಪ್ರಕಟಿಸುತ್ತಾ ಅವರು ಈ ವಿಷಯ ತಿಳಿಸಿದರು.
ಮಂಗಳೂರಿನ ತುಳುಭವನದಲ್ಲಿ ನಡೆದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಪಾರ್ತಿಸುಬ್ಬ ಪ್ರಶಸ್ತಿಯೊಂದಿಗೆ ಐವರು ಕಲಾವಿದರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಹಾಗೂ 10 ಮಂದಿ ಕಲಾವಿದರನ್ನು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದೂ ಅವರು ಪ್ರಕಟಿಸಿದರು.
ಅಕಾಡೆಮಿ ನೀಡುವ ಪಾರ್ತಿಸುಬ್ಬ ಪ್ರಶಸ್ತಿ ಒಂದು ಲಕ್ಷ ರೂ.ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರವನ್ನು ಹೊಂದಿದ್ದರೆ, ಗೌರವ ಪ್ರಶಸ್ತಿಯು 50,000ರೂ. ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ. ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ 10 ಮಂದಿ ತಲಾ 25,000ರೂ. ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರವನ್ನು ಪಡೆಯಲಿದ್ದಾರೆ ಎಂದವರು ವಿವರಿಸಿದರು.
ಗೌರವ ಪ್ರಶಸ್ತಿ ವಿಜೇತ ಕಲಾವಿದರು: 2024ನೇ ಸಾಲಿನ ಗೌರವ ಪ್ರಶಸ್ತಿಗೆ ಬೆಳ್ತಂಗಡಿಯ ತೆಂಕುತಿಟ್ಟು ಕಲಾವಿದ ಕೊಳ್ತಿಗೆ ನಾರಾಯಣ ಗೌಡ, ಕುಂದಾಪುರದ ಬಡಗುತಿಟ್ಟಿನ ಕೋಡಿ ವಿಶ್ವನಾಥ ಗಾಣಿಗ, ಬಂಟ್ವಾಳದ ಪ್ರಸಾಧನ ಕಲಾವಿದ ರಾಘವ ದಾಸ್, ತೆಂಕುತಿಟ್ಟಿನ ಬಂಟ್ವಾಳದ ಸುಬ್ರಾಯ ಹೊಳ್ಳ ಹಾಗೂ ಮೂಡಲಪಾಯ ಯಕ್ಷಗಾನ ಕಲಾವಿದ ತುಮಕೂರು ಅರಳಗುಪ್ಪೆಯ ಕಾಂತರಾಜು ಅವರು ಆಯ್ಕೆಯಾಗಿದ್ದಾರೆ.
ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ವಿಜೇತರು: ಕಾಸರಗೋಡಿನ ಹಿರಿಯ ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಭಟ್, ಬಡಗುತಿಟ್ಟು ಕಲಾವಿದ ಉಡುಪಿಯ ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ, ಕಾಸರಗೋಡಿನ ಹಾಸ್ಯಗಾರ ಮವ್ವಾರು ಬಾಲಕೃಷ್ಣ ಮಣಿ ಯಾಣಿ, ತೆಂಕುತಿಟ್ಟಿನ ಬಣ್ಣದ ವೇಷಧಾರಿ ಮಂಗಳೂರಿನ ಉಮೇಶ್ ಕುಪ್ಪೆಪದವು, ಬಡಗುತಿಟ್ಟಿನ ಸ್ತ್ರೀವೇಷ ಕಲಾವಿದ ಶಿವಮೊಗ್ಗದ ಶಿವಾನಂದ ಗೀಜಗಾರು.
ಬಡಗುತಿಟ್ಟಿನ ಸ್ತ್ರೀವೇಷಧಾರಿ ಹೊನ್ನಾವರದ ಮುಗ್ವಾ ಗಣೇಶ್ ನಾಯ್ಕ, ತೆಂಕುತಿಟ್ಟು ಸ್ತ್ರೀವೇಷಧಾರಿ ಮಂಗಳೂರಿನ ಸುರೇಂದ್ರ ಮಲ್ಲಿ, ಭಾಗವತ ಹಾಗೂ ಪ್ರಸಂಗಕರ್ತ ಮಂಗಳೂರಿನ ಅಂಡಾಲ ದೇವಿಪ್ರಸಾದ ಶೆಟ್ಟಿ, ಮೂಡಲಪಾಯ ಯಕ್ಷಗಾನ ಕಲಾವಿದ ಬೆಂಗಳೂರು ಗ್ರಾಮಾಂತರದ ಕೃಷ್ಣಪ್ಪ ಹಾಗೂ ಉಭಯತಿಟ್ಟುಗಳ ಕಲಾವಿದೆ ಚಿಕ್ಕಮಗಳೂರಿನ ಹಳುವಳ್ಳಿ ಜ್ಯೋತಿ ಅವರು ಆಯ್ಕೆಯಾಗಿದ್ದಾರೆ.
ದತ್ತಿ ಪ್ರಶಸ್ತಿಗೆ ಆಯ್ಕೆ: 2024ನೇ ಸಾಲಿನ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಗೆ ತೆಂಕುತಿಟ್ಟು ಯಕ್ಷಗಾನದ ಕಲಾವಿದ ಬಂಟ್ವಾಳದ ಕರ್ಗಲ್ಲು ವಿಶ್ವೇಶ್ವರ ಭಟ್ಟ ಆಯ್ಕೆಯಾಗಿದ್ದಾರೆ. ಇವರು 25,000ರೂ. ನಗದು, ಪ್ರಶಸ್ತಿ ಫಲಕವನ್ನು ಪಡೆಯಲಿದ್ದಾರೆ ಎಂದು ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್., ಅಕಾಡೆಮಿಯ ಸದಸ್ಯರಾದ ಸತೀಶ ಅಡಪ ಸಂಕಬೈಲ್, ಸುಧಾಕರ ಶೆಟ್ಟಿ, ರಾಘವ ಎಚ್., ಕೃಷ್ಣಪ್ಪ ಪೂಜಾರಿ ಕಿನ್ಯಾ, ದಯಾನಂದ ಪಿ., ಮೋಹನ ಕೊಪ್ಪಲ ಕದ್ರಿ, ಗುರುರಾಜ್ ಭಟ್, ರಾಜೇಶ್ ಕುಳಾಯಿ, ವಿದ್ಯಾಧರ ಜಲವಳ್ಳಿ ಉಪಸ್ಥಿತರಿದ್ದರು.
ಫೆ.16ರಂದು ಉಡುಪಿಯಲ್ಲಿ ಪ್ರಶಸ್ತಿ ಪ್ರದಾನ
ಈ ಬಾರಿಯ ಅಕಾಡೆಮಿಯ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಮುಂದಿನ ಫೆ.16ರಂದು ಉಡುಪಿಯಲ್ಲಿರುವ ಯಕ್ಷಗಾನ ಕಲಾರಂಗದ ಸಭಾಭವನದಲ್ಲಿ ನಡೆಯಲಿದೆ ಎಂದು ಡಾ.ತಲ್ಲೂರು ತಿಳಿಸಿದರು.
ಸಮಾರಂಭದಲ್ಲಿ ಇಲಾಖೆಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳೊಂದಿಗೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಮಾಂಬಾಡಿ ಸುಬ್ರಹ್ಮಣ್ಯ ಭಟ್ಗೆ ಪ್ರಶಸ್ತಿ ಗರಿ
ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಹಿಮ್ಮೇಳ ಕಲಾವಿದರೂ, ಹಿರಿಯ ಗುರುಗಳೂ ಆಗಿರುವ ಮಾಂಬಾಡಿ ಸುಬ್ರಹ್ಮಣ್ಯ ಭಟ್ (75) ಅವರು ಈ ಬಾರಿಯ ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ ಅತ್ಯುನ್ನತ ಪಾರ್ತಿಸುಬ್ಬ ಪ್ರಶಸ್ತಿಯನ್ನು ತನ್ನ ಮುಡಿಗೆ ಏರಿಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಮಾಂಬಾಡಿಯವರಾದ ಸುಬ್ರಹ್ಮಣ್ಯ ಭಟ್ ಅವರು ಮಾಂಬಾಡಿ ನಾರಾಯಣ ಭಾಗವತರ ಪುತ್ರರು. ಸದ್ಯ ಉರಿಮಜಲಿನಲ್ಲಿ ವಾಸವಾಗಿರುವ ಇವರು ತಂದೆಯ ಮಾರ್ಗದರ್ಶನದಲ್ಲಿ ಕಲಾವಿದರಾಗಿ ಅರಳಿ ಬೆಳೆದು ಕಟೀಲು, ಕೂಡ್ಲು, ಕರ್ನಾಟಕ, ಕದ್ರಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ. ಅಲ್ಲದೇ ಅವರು ಕರ್ನಾಟಕ, ಕಾಸರಗೋಡು ಜಿಲ್ಲೆಗಳಲ್ಲಿ ನೂರಾರು ಮಂದಿ ಆಸಕ್ತರಿಗೆ ಹಿಮ್ಮೇಳದ ತರಬೇತಿ ನೀಡಿದ್ದಾರೆ.
ಸುಬ್ರಹ್ಮಣ್ಯ ಭಟ್ಟರು ಪ್ರಸಿದ್ಧ ಹಿಮ್ಮೇಳವಾದಕರಾದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಶಿಷ್ಯರಾಗಿದ್ದರು. ಈಗ ಅವರ ಇಬ್ಬರು ಇಂಜಿನಿಯರ್ ಪುತ್ರರಲ್ಲಿ ವೇಣುಗೋಪಾಲ್ ಎಳವೆಯಲ್ಲೇ ಚಂಡೆ-ಮದ್ದಲೆ ಕಲಿತು ಉತ್ತಮ ಹಿಮ್ಮೇಳವಾದಕರಾಗಿ ಹೆಸರು ಪಡೆದಿದ್ದಾರೆ.