ಸ್ನೇಹಾಲಯದ ಮನ್ನಾ ಯೋಜನೆಗೆ 100 ವರ್ಷಗಳ ಸಹಕಾರ
ಉಡುಪಿ, ಡಿ.19: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ರೋಗಿಗಳ ಸಹಾಯಕರಿಗೆ ಕಳೆದ ಹಲವಾರು ವರುಷಗಳಿಂದ ವಿವಿಧ ದಾನಿಗಳ ಸಹಕಾರದಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ನೀಡುವ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನ ಮನ್ನಾ ಯೋಜನೆಯ ಮುಂದಿನ 100 ವರ್ಷಗಳ ಕಾಲ ಸಂಪೂರ್ಣ ವೆಚ್ಚವನ್ನು ನಿರ್ವಹಿಸಲು ದೆಹಲಿಯ ಉದ್ಯಮಿ ಸಾಸ್ತಾನದ ಜೋಸೆಫ್ ಮಿನೇಜಸ್ ಮತ್ತು ಕುಟುಂಬ ಮುಂದಾಗಿದೆ.
ಟ್ರಿನಿಟಿ ಮನ್ನಾ ಈ ವಿಶಿಷ್ಟ ಯೋಜನೆಯ ಉದ್ಘಾಟನೆಯು ಇತ್ತಿಚಿಗೆ ಸಾಸ್ತಾನದಲ್ಲಿರುವ ಜೋಸೆಫ್ ಮಿನೇಜಸ್ರವರ ನಿವಾಸದಲ್ಲಿ ನಡೆಯಿತು. ಯೋಜನೆಯ ಸಹಾಯಾರ್ಥವಾಗಿ ಕುಟುಂಬಸ್ಥರು ನೀಡಿರುವ 12 ಲಕ್ಷ ರೂ. ಮೌಲ್ಯದ ವಾಹನವನ್ನು ಫಾ.ಜೋಕಿಂ ಡಿಸೋಜ ಮತ್ತು ಸಾಸ್ತಾನ ಚರ್ಚ್ ಪ್ರಧಾನ ಧರ್ಮಗುರು ಫಾ.ಸುನಿಲ್ ಡಿಸಿಲ್ವಾ ಆಶೀರ್ವದಿಸಿದರು.
ಈ ಸಂಧರ್ಭದಲ್ಲಿ ಕುಟುಂಬಸ್ಥರಾದ ಜೋಸೆಫ್ ಮಿನೇಜಸ್ ಮತ್ತು ವೀಣಾ ಮಿನೇಜಸ್, ಜೋಸ್ವೀನ್ ಮತ್ತು ಶ್ವೇತಾ ಮೆನೆಜಸ್, ನಾಥನ್ ಮತ್ತು ಜೇಸನ್ ಉಪಸ್ಥಿತರಿದ್ದರು.
ಟ್ರಿನಿಟಿ ಮನ್ನಾ ಯೋಜನೆಗೆ ಪ್ರತಿ ತಿಂಗಳು ಸುಮಾರು 3 ಲಕ್ಷ ರೂ. ಖರ್ಚು ಇದ್ದು ಇದನ್ನು ಜೋಸೆಫ್ ಮಿನೇಜಸ್ ಮತ್ತು ಕುಟುಂಬಸ್ಥರು ಭರಿಸಲಿದ್ದಾರೆ. ಈ ಯೋಜನೆ 100 ವರ್ಷಗಳ ಕಾಲ ಮಿನೇಜಸ್ ಕುಟುಂಬದ ಮೂರು ತಲೆಮಾರುಗಳು ನಿರ್ವಹಿಸಲಿದ್ದಾರೆ. ಧರ್ಮಗುರು ಫಾ. ರೋಮಿಯೋ ಲುವಿಸ್, ಫಾ.ಸಿರಿಲ್ ಡಿಸೋಜ, ಫಾ.ಜಾನ್ ಫೆರ್ನಾಂಡಿಸ್, ವಿಕ್ಟರ್ ಕ್ರಾಸ್ತಾ, ಜೋಸೆಫ್ ಮೆನೆಜಸನ್, ಸಂಜಯ್ ಶರ್ಮಾ, ಸಾಜು ಮ್ಯಾಥ್ಯೂ ಮತ್ತು ಸಿಸಿಲಿ ಸಾಜು, ಲ್ಯಾನ್ಸಿ ಸಿಕ್ವೇರಾ ಹಾಜರಿದ್ದರು.
ಕುಟುಂಬದ ಆಪ್ತರಾದ ರಿಚರ್ಡ್ ಮಿನೇಜಸ್, ಸ್ನೇಹಾಲಯ ಟ್ರಸ್ಟ್ನ ಟ್ರಸ್ಟಿ ಪ್ರಕಾಶ್ ಪಿಂಟೋ, ಸ್ನೇಹಾಲಯದ ಸ್ಥಾಪಕ ಜೋಸೆಫ್ ಕ್ರಾಸ್ತಾ ಅವರನ್ನು ಸನ್ಮಾನಿಸಲಾಯಿತು. ಐವನ್ ಅಲ್ಮೇಡಾ ಮತ್ತು ತಂಡವು ಪ್ರಾರ್ಥನೆ ನೆರವೇರಿಸಿತು. ಅಲ್ವಿನ್ ಅಂದ್ರಾದೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜೋಸೆಫ್ ಮೆನೆಜಸ್ ವಂದಿಸಿದರು.