ಭಾರತೀಯರ ಅಭಿವೃದ್ಧಿಗೆ 125ಕೋಟಿ ರೂ. ವಿನಿಯೋಗ: ವಿಕ್ಟೋರಿಯಾ ಸಂಸದ ಜಾನ್ ಮುಲಾಹಿ
ಉಡುಪಿ, ಜ.14: ಆಸ್ಟ್ರೇಲಿಯಾದಲ್ಲಿರುವ ವಿಕ್ಟೋರಿಯಾ ರಾಜ್ಯದ ಭಾರತೀಯರ ಶ್ರದ್ಧಾ ಕೇಂದ್ರದ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಲಭ್ಯಕ್ಕೆ ಕಳೆದ 10ವರ್ಷಗಳಲ್ಲಿ 125ಕೋಟಿ ರೂ. ವ್ಯಯ ಮಾಡಲಾಗಿದೆ ಎಂದು ವಿಕ್ಟೋರಿಯಾ ರಾಜ್ಯದ ಸಂಸದ ಜಾನ್ ಮುಲಾಹಿ ತಿಳಿಸಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿಯ ಹಿನ್ನೆಲೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕ್ಟೋರಿಯಾ ರಾಜ್ಯದಲ್ಲಿ ತಾನು ಪ್ರತಿನಿಧಿಸುವ ಕ್ಷೇತ್ರವು 52,000ಜನಸಂಖ್ಯೆ ಹೊಂದಿದ್ದು ಇದರಲ್ಲಿ ಶೇ.6ರಷ್ಟು ಭಾರತೀಯರು ಇದ್ದಾರೆ. ಇಲ್ಲಿ ನಾನು ಎರಡನೇ ಬಾರಿ ಸಂಸತ್ ಸ್ಥಾನದ ಸ್ಪರ್ಧೆಗೆ ಉತ್ಸುಕ ನಾಗಿದ್ದೇನೆ. ಮೆಲ್ಬೊರ್ನ್‌ನಲ್ಲಿರುವ ಶ್ರೀವೆಂಕಟಕೃಷ್ಣ ವೃಂದಾವನದ ಅಭಿವೃದ್ಧಿಗಾಗಿ ಮೂರು ವರ್ಷಗಳ ಅವಧಿಯಲ್ಲಿ ಐದು ಕೋಟಿ ರೂ. ನೀಡಿದ್ದು ಉತ್ಸವ, ಹಬ್ಬಗಳಿಗೆ ಸರಕಾರ ಧನ ಸಹಾಯ ಮಾಡುತ್ತದೆ ಎಂದರು.
ವಿಕ್ಟೋರಿಯಾ ರಾಜ್ಯದಲ್ಲಿ ಶಾಂತಿ, ಸೌಹಾರ್ದಕ್ಕಾಗಿ ನಾಲ್ಕು ದಶಕಗಳ ಹಿಂದೆ ವಿಕ್ಟೋರಿಯನ್ ಮಲ್ಟಿ ಕಲ್ಚರಲ್ ಕಮಿಷನ್ ಸ್ಥಾಪಿಸಿದ್ದು ಸಮುದಾಯದ ನಾಯಕರು ನೇತೃತ್ವ ವಹಿಸಿದ್ದಾರೆ. ಹೀಗಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಯನ್ನು ಮೂಲ ದಲ್ಲೇ ತಡೆಯಲಾಗುತ್ತದೆ ಎಂದು ಅವರು ಹೇಳಿದರು.
ಮಂಟಪ ಉದ್ಘಾಟನೆ: ಪರ್ಯಾಯ ಪುತ್ತಿಗೆ ಮಠ ಅಶ್ರಯದಲ್ಲಿ ಶ್ರೀಕೃಷ್ಣ ಮಠದಲ್ಲಿ ಉಡುಪಿ ಸಪ್ತೋತ್ಸವ ಮಕರ ಸಂಕ್ರಮಣ ಅಂಗವಾಗಿ ಮಂಗಳವಾರ ಗೀತಾಮಂದಿರದಲ್ಲಿ ಕೃಷ್ಣ ಗೀತಾನುಭವ ಮಂಟಪವನ್ನು ಆಸ್ಟ್ರೆಲಿಯಾದ ವಿಕ್ಟೋರಿಯಾ ರಾಜ್ಯದ ಸಂಸದ ಜಾನ್ ಮುಲಾಹಿ ಉದ್ಘಾಟಿಸಿದರು.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀವರ್ಚನ ನೀಡಿದರು. ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ, ನವದೆಹಲಿಯ ಸಿಬಿಎಸ್‌ಇ ಎಫಿಲಿಯೇಷನ್ ವಿಭಾಗದ ನಿರ್ದೇಶಕ ಜಯಪ್ರಕಾಶ್ ಚತುರ್ವೇದಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಲ್ಬೋರ್ನ್ ನಿವಾಸಿಗಳಾದ ರಮೇಶ್, ಅಶ್ವಿನ್ ಬಿಂದು, ರಾಜು, ಪುತ್ತಿಗೆ ಮಠದ ಪ್ರಸನ್ನ ಆಚಾರ್ಯ, ರಮೇಶ್ ಭಟ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಸದ ಜಾನ್ ಮುಲಾಹಿ ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.