ಉಡುಪಿ ನಗರಸಭೆ ಸಾಮಾನ್ಯ ಸಭೆ: ನೀರಿನ ಶುಲ್ಕದಲ್ಲಿ ಶೇ.15ರಷ್ಟು ಕಡಿತ
ನೀರಿನ ಶುಲ್ಕ ಪರಿಷ್ಕರಣೆಗೆ ನಗರಸಭಾ ಸದಸ್ಯರ ಒಪ್ಪಿಗೆ
ಉಡುಪಿ: 2023ರಲ್ಲಿ ಆಡಳಿತಾಧಿಕಾರಿಯವರಿದ್ದ ಸಂದರ್ಭದಲ್ಲಿ ಗಣನೀಯವಾಗಿ ಏರಿಸಿದ ಉಡುಪಿ ನಗರಸಭೆಯ ಸಾರ್ವಜನಿಕ ಕುಡಿಯುವ ನೀರಿನ ಶುಲ್ಕವನ್ನು ಪರಿಷ್ಕರಣೆಗೊಳಿಸಿ ಶೇ.15ರಷ್ಟು ಕಡಿತಗೊಳಿಸುವ ನಗರಸಭೆಯ ನಿರ್ಧಾರಕ್ಕೆ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಸರ್ವಾನುಮತದ ಒಪ್ಪಿಗೆ ಸೂಚಿಸಿದರು.
ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ 2023ರ ಅ.3ರಂದು ಆಡಳಿತಾಧಿಕಾರಿಯವರು ತೆಗೆದುಕೊಂಡ ನಿರ್ಣಯದಂತೆ ಅದೇ ವರ್ಷದ ನವೆಂಬರ್ 1ರಂದು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನೀರಿನ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಏರಿಸಲಾಗಿತ್ತು.
ಆದರೆ ಕಳೆದ ಸೆಪ್ಟಂಬರ್ 6ರಂದು ಪ್ರಭಾಕರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಾರ್ವಜನಿ ಕರ ಹಿತದೃಷ್ಟಿಯಿಂದ ನೀರಿನ ಬಳಕೆಯ ಶುಲ್ಕವನ್ನು ಪುನರ್ಪರಿಶೀಲಿಸುವಂತೆ ಸದಸ್ಯರು ಆಗ್ರಹಿಸಿದ್ದರು. ಸಭೆಯ ನಿರ್ಣಯದಂತೆ ಇದೀಗ ನೀರಿನ ಶುಲ್ಕವನ್ನು ಬಳಕೆಯ ಆಧಾರದಲ್ಲಿ ಪರಿಷ್ಕರಿಸಲಾಗಿದ್ದು, ಹೊಸ ದರ ಡಿಸೆಂಬರ್ ಒಂದರಿಂದ ಜಾರಿಗೆ ಬರಲಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.
ಅದರಂತೆ ಹೊಸ ಸಂಪರ್ಕಕ್ಕೆ ನಿಗದಿಯಾದ ಕನಿಷ್ಠ ದರವನ್ನೂ ಇಳಿಸಲಾಗಿದೆ. ಗೃಹ ಬಳಕೆಯ ಸಂಪರ್ಕಕ್ಕೆ ಹಿಂದೆ ಇದ್ದ 88ರೂ. ಕನಿಷ್ಠ ಶುಲ್ಕವನ್ನು 72ರೂ.ಗೆ ಇಳಿಸಲಾಗಿದೆ. ಅದರೆ ಗೃಹೇತರ ಸಂಪರ್ಕದ ದರವನ್ನು 200ರೂ.ಗೆ ಉಳಿಸಿ ಕೊಂಡಿದ್ದರೆ, ವಾಣಿಜ್ಯ ಮತ್ತು ಕೈಗಾರಿಕಾ ಸಂಪರ್ಕಕ್ಕೆ ಇರುವ ದರವನ್ನು 400ರೂ.ನಿಂದ 360ಕ್ಕೆ ಇಳಿಸಲಾಗಿದೆ.
ಇನ್ನು ಗೃಹಬಳಕೆಯಲ್ಲಿ 8000ಲೀ.ವರೆಗೆ ಬಳಕೆ ದರವನ್ನು ಪ್ರತಿ 1000ಲೀ.ಗೆ 11ರೂ.ನಿಂದ 9ರೂ. ಇಳಿಸಲಾಗಿದ್ದರೆ, 8ಸಾವಿರದಿಂದ 15ಸಾವಿರ ಲೀ.ವರೆಗೆ ಬಳಕೆ ದರವನ್ನು 15ರಿಂದ 12ರೂ.ಗೆ ಇಳಿಸಲಾಗಿದೆ. ಅತಿ ಮುಖ್ಯವಾಗಿ 15 ಸಾವಿರ ಲೀ.ನಿಂದ 20ಸಾವಿರ ಲೀ.ನ ಪ್ರಮಾಣವನ್ನು 15ಸಾವಿರ ಲಿ.ನಿಂದ 25ಸಾವಿರ ಲಿ.ಶ್ರೇಣಿಗೆ ಏರಿಸಿ ಪ್ರತಿ 1000ಲೀ.ಗೆ ಬಳಕೆ ದರವನ್ನು 20ರೂ.ನಿಂದ 15ರೂ.ಗೆ ಇಳಿಸಲಾಗಿದೆ. 25,000ಲೀ.ಕ್ಕಿಂತ ಅಧಿಕ ನೀರಿನ ಬಳಕೆಗೆ ಪ್ರತಿ 1000ಲೀ.ಗೆ ಇದ್ದ 30ರೂ.ವನ್ನು 25ರೂ.ಗೆ ಇಳಿಸಲಾಗಿದೆ.
ಗೃಹೇತರ ಬಳಕೆಯಲ್ಲಿ 8000ಲೀ.ವರೆಗೆ ಪ್ರತಿ 1000ಲೀ.ಗೆ 25ರೂ. ಇದ್ದು, 8ರಿಂದ 15 ಸಾವಿರ ಲೀ.ಬಳಕೆಯ ಶುಲ್ಕವನ್ನು 35ರಿಂದ 30ಕ್ಕೆ, 15ರಿಂದ 25ಸಾವಿರ ಲೀ. ನೀರಿನ ಬಳಕೆಗೆ 40ರೂ. ಹಾಗೂ 25ಸಾವಿರ ಲೀ.ಬಳಕೆಗಿಂತ ಅಧಿಕ ಪ್ರತಿ 1000ಲೀ.ನೀಗೆ 50ರೂ.ವನ್ನು ನಿಗದಿ ಪಡಿಸಲಾಗಿದೆ.
ವಾಣಿಜ್ಯ ಹಾಗೂ ಕೈಗಾರಿಕೆಗಳಿಗೆ ಬಳಸುವ ನೀರಿನ ಶುಲ್ಕದಲ್ಲೂ ಇಳಿಕೆ ಮಾಡಲಾಗಿದೆ. 8ಸಾವಿರ ಲೀ.ವರೆಗೆ 50ರೂ. ಇದ್ದ ಶುಲ್ಕ 45ಕ್ಕೆ ಇಳಿದಿದೆ. 8ರಿಂದ 15 ಸಾವಿರ ಲೀ.ಬಳಕೆಗೆ ದರ 60ರಿಂದ 55ರೂ.ಗೆ ಇಳಿದಿದೆ. 15ರಿಂದ 25ಸಾವಿರ ಲೀ.ಗೆ 65ರೂ. ಹಾಗೂ 25ಸಾವಿರ ಲೀ.ಗಿಂತ ಅಧಿಕ ನೀರಿನ ಬಳಕೆಗೆ 70ರೂ.ವನ್ನು ನಿಗದಿಪಡಿಸಲಾಗಿದೆ.
ಅಂಗನವಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಕಾಲೇಜುಗಳಿಗೆ ಇದ್ದ ಉಚಿತ ನೀರಿನ ಬಳಕೆಯ ಪ್ರಮಾಣವನ್ನು 45,000 ಲೀ.ಗೆ ನಿಗದಿಗೊಳಿಸಲಾಗಿದೆ. ಇದಕ್ಕಾಗಿ ಇಲ್ಲಿ ಮೀಟರ್ಗಳನ್ನು ಅಳವಡಿಸಲು ನಿರ್ಧರಿಸಲಾ ಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಮಲ್ಪೆ ಅಭಿವೃದ್ಧಿ ಸಮಿತಿ ಬರ್ಖಾಸ್ತು: ಇತ್ತೀಚೆಗೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಮಲ್ಪೆಯಲ್ಲಿ ಇದುವರೆಗೆ ಕಾರ್ಯನಿರ್ವಹಿಸುತಿದ್ದ ಮಲ್ಪೆ ಅಭಿವೃದ್ಧಿ ಸಮಿತಿಯನ್ನು ಬರ್ಖಾಸ್ತುಗೊಳಿಸುವ ನಿರ್ಧಾರವನ್ನು ನಗರಸಭಾ ಸದಸ್ಯರು ತೀವ್ರವಾಗಿ ಟೀಕಿಸಿದರು.
ವಡಬಾಂಡೇಶ್ವರ ವಾರ್ಡ್ನ ಸದಸ್ಯ ಯೋಗೇಶ್ ಸಾಲ್ಯಾನ್ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ನಗರಸಭೆಗೆ ಬೀಚ್ ಹಾಗೂ ಆಸುಪಾಸಿನ ಜಾಗದ ಸ್ವಚ್ಛತೆಯನ್ನು ಮಾತ್ರ ನೋಡಿಕೊಳ್ಳುವ ಕೆಲಸ ಉಳಿದಿರುವುದನ್ನು ಖಂಡಿಸಿದರು. ಅವರನ್ನು ಕಾಂಗ್ರೆಸ್ನ ರಮೇಶ್ ಕಾಂಚನ್ ಸೇರಿದಂತೆ ಉಳಿದ ಸದಸ್ಯರು ಬೆಂಬಲಿಸಿದರು.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯ ನಿರ್ಧಾರವನ್ನು ತಿಳಿಸಿದ ಪೌರಾಯುಕ್ತ ಡಾ.ಉದಯ ಶೆಟ್ಟಿ, ಸದ್ಯ ನಗರಸಭೆ ಯಿಂದ ಅನುಮತಿ ಪಡೆದ 24 ಅಂಗಡಿಗಳ ಶುಲ್ಕ ವಸೂಲಿ ಮಾತ್ರ ನಮಗೆ ಉಳಿದಿದೆ. ಮುಂದಿನ ಅವಧಿಗೆ ಟೆಂಡರ್ ಪ್ರಕ್ರಿಯೆ ನಡೆಯುವವರೆಗೆ ಈಗಿರುವ ದರದಲ್ಲಿ ಬೀಚ್ ಪ್ರದೇಶದಲ್ಲಿರುವ ಪಾರ್ಕಿಂಗ್ ಶುಲ್ಕ ಹಾಗೂ ತಾತ್ಕಾಲಿಕ ಅಂಗಡಿ ಮಳಿಗೆಗಳ ಶುಲ್ಕವನ್ನು ನಗರಸಭೆಯ ವತಿಯಿಂದ ವಸೂಲಿ ಮಾಡಲು ಅವಕಾಶ ದೊರೆತಿದೆ. ಪಾರ್ಕಿಂಗ್ ಶುಲ್ಕವನ್ನು ಈಗಿರುವ ದರದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಮೂಲಕ ವಸೂಲಿ ಮಾಡಬಹುದಾಗಿದೆ ಎಂದು ಡಾ.ಶೆಟ್ಟಿ ತಿಳಿಸಿದರು.
ಸಭೆಯಲ್ಲಿ ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ, ನಗರಸಭಾ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಪೌರಾಯುಕ್ತ ಡಾ.ಉದಯ ಶೆಟ್ಟಿ ಉಪಸ್ಥಿತರಿದ್ದರು. ಸಭೆಯಲ್ಲಿ ಹೆಚ್ಚುತ್ತಿರುವ ಬೀದಿನಾಯಿ, ಹುಚ್ಚುನಾಯಿಗಳ ನಿಯಂತ್ರಣ, ಮಣಿಪಾಲ ಸೇರಿದಂತೆ ನಗರದ ವಿವಿದೆಡೆ ಇರುವ ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆ, ಈಗಾಗಲೇ ಪ್ರಾರಂಭಗೊಂಡಿರುವ ನೀರಿನ ಸಮಸ್ಯೆ, ಮಣಿಪಾಲ ಸರಳೆಬೆಟ್ಟು ಸಮೀಪದ ಬಬ್ಬುಸ್ವಾಮಿ ಲೇಔಟ್ನ ನೂರಾರು ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಸದಸ್ಯರು ವ್ಯಾಪಕ ಚರ್ಚೆ ನಡೆಸಿದರು.
ಮಾಹೆಗೆ ನೀರು: ಶರತ್ತಿಗೆ ಸದಸ್ಯರ ಆಗ್ರಹ
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಮಣಿಪಾಲದ ಮಾಹೆ ವಿವಿಯವರಿಗೆ ಸ್ವರ್ಣ ಎರಡನೇ ಹಂತದಿಂದ ನೀರು ನೀಡುವ ವಿಷಯ ಪ್ರಸ್ತಾಪಗೊಂಡಾಗ ಹಲವು ಸದಸ್ಯರ ಇದರ ವಿರುದ್ಧ ಧ್ವನಿ ಎತ್ತಿದರು. ಈ ಬಗ್ಗೆ ವಿವರ ನೀಡಿದ ಪೌರಾಯುಕ್ತರು, ಮಾಹೆಯವರಿಗೆ ಸ್ವರ್ಣ ಮೊದಲ ಹಂತದಿಂದ ನೀರು ಸರಬರಾಜು ಮಾಡಲಾಗುತಿದ್ದು, ಈಗ ನಡೆದಿರುವ ರಾ.ಹೆದ್ದಾರಿ 169ಎ ವಿಸ್ತರಣೆ ಕಾಮಗಾರಿ ವೇಳೆ ಪೈಪ್ಲೈನ್ ಒಡೆದು ತೊಂದರೆಯಾಗಿದೆ. ಅವರಿದನ್ನು ಇನ್ನೂ ಸರಿಪಡಿಸಿಲ್ಲ. ಹೀಗಾಗಿ ಸ್ವರ್ಣ ಎರಡನೇ ಹಂತದಿಂದ ಈಗ ನೀರು ಸರಬರಾಜು ಆಗುತ್ತಿದೆ ಎಂದು ವಿವರಿಸಿದರು.
ಆದರೆ ಇದರಿಂದ ನಗರಕ್ಕೆ ನೀರು ಸರಬರಾಜಿನ ಆಗಾಗ ವ್ಯತ್ಯಯ ವಾಗುತ್ತಿದೆ ಎಂದು ಇಂಜಿನಿಯರ್ ತಿಳಿಸಿದರು. ಮಾಹೆಯೊಂದಿಗೆ 2012ರಲಿಲ ನಗರಸಭೆ ಒಪ್ಪಂದ ಮಾಡಿಕೊಂಡಿತ್ತು. ಬಳಿಕ 2022ರಲ್ಲಿ ಒಪ್ಪಂದವನ್ನು ನವೀಕರಿಸಿ ಮುಂದುವರಿಸಲಾಗಿತ್ತು. ಆಡಳಿತಾಧಿಕಾರಿ ಇದ್ದ ಸಂದರ್ಭದಲ್ಲಿ ಸದಸ್ಯರ ಗಮನಕ್ಕೆ ತಾರದೇ ಎರಡನೇ ಹಂತದಿಂದ ನೀರು ನೀಡಲಾಗಿತ್ತು ಎಂದು ಅಧ್ಯಕ್ಷರು ತಿಳಿಸಿದರು.
ನಗರಸಭೆಯ ಜನರಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟು ಮಾಡಿ ಮಾಹೆಗೆ ನೀರು ಕೊಡುತ್ತಿರುವುದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅವರಿಗೆ 9ಗಂಟೆ ನೀಡುತಿದ್ದ ನೀರನ್ನು ಈಗ 5 ಗಂಟೆ ಮಾತ್ರ ನೀಡಲಾಗುತ್ತಿದೆ. ನೀರು ಸರಬರಾಜಿನ ಎಲ್ಲಾ ನಿಯಂತ್ರಣವೂ ನಗರಸಭೆಯ ಬಳಿಯೇ ಇದೆ ಎಂದು ಅಧ್ಯಕ್ಷರು ಸಮಜಾಯಿಸಿ ನೀಡಿದರು.
ಜನರಿಗೆ ತೊಂದರೆಯಾಗುವುದಾದರೆ ಅವರಿಗೆ ನಾಲ್ಕು ಗಂಟೆ ಮಾತ್ರ ನೀರು ಕೊಡಿ. ನೀರು ಕೊಡಬೇಕಿದ್ದರೆ ಜನರಿಗೆ ತೊಂದರೆಯಾಗುವಂತೆ ಅವರು ಹಲವು ಕಡೆ ಹಾಕಿರುವ ಗೇಟುಗಳನ್ನು ತೆರವುಗೊಳಿಸುವ ಶರತ್ತುಗಳನ್ನು ವಿಧಿಸಿ ಎಂದು ಸದಸ್ಯರು ಆಗ್ರಹಿಸಿದರು. ಡಿಸೆಂಬರ್ ತಿಂಗಳಲ್ಲಿ ವಾರಾಹಿ ನೀರು ಲಭ್ಯವಾದ ಬಳಿಕ ನಗರದ ನೀರಿನ ಸಮಸ್ಯೆ ಬಗೆಹರಿ ಯಲಿದೆ ಎಂದು ಅಧ್ಯಕ್ಷ ಪ್ರಭಾಕರ ಪೂಜಾರಿ ಸಮಾಧಾನ ಪಡಿಸಿದರು.