ಮತಗಟ್ಟೆಗಳಲ್ಲಿ 1500ಕ್ಕೂ ಅಧಿಕ ಮತಗಳಿದ್ದಲ್ಲಿ ಹೆಚ್ಚುವರಿ ಮತಗಟ್ಟೆ: ಡಾ.ಎಂ.ಟಿ.ರೇಜು
ವೀಕ್ಷಕರ ಸಭೆ
ಉಡುಪಿ, ನ.16:ಜಿಲ್ಲೆಯ ಕೆಲವು ಮತಗಟ್ಟೆಗಳಲ್ಲಿ 1500ಕ್ಕೂ ಅಧಿಕ ಮತಗಳಿದ್ದಲ್ಲಿ ಹೆಚ್ಚುವರಿ ಮತಗಟ್ಟೆ ಸ್ಥಾಪನೆಗೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಟಿ. ರೇಜು ಅವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಮತದಾರರ ಪಟ್ಟಿಯ ವೀಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂದರ್ಭದಲ್ಲಿ ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರು ತೆಗೆದು ಹಾಕುವ ಕಾರ್ಯಗಳನ್ನು ಯಾವುದೇ ಲೋಪದೋಷಗಳಿಲ್ಲದಂತೆ ಕೈಗೊಳ್ಳಬೇಕು ಎಂದೂ ಅವರು ಸಂಬಂಧಿತರಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಈಗಾಗಲೇ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ಚುನಾವಣಾ ಆಯೋಗದ ಸೂಚನೆ ಮೇರೆಗೆ ಕೈಗೊಳ್ಳಲಾಗುತ್ತಿದೆ. ಒಂದು ತಿಂಗಳ ಕಾಲ ಬೂತ್ ಮಟ್ಟದ ಮತಗಟ್ಟೆ ಅಧಿಕಾರಿಗಳು ಸಾರ್ವಜನಿಕರಿಂದ ಹೆಸರು ಸೇರ್ಪಡೆ, ತಿದ್ದುಪಡಿ, ಹೆಸರನ್ನು ತೆಗೆದು ಹಾಕುವ ಡೇಟಾವನ್ನು ಪರಿಶೀಲಿಸಲು ಮನೆಗಳಿಗೆ ಭೇಟಿ ನೀಡುತ್ತಾರೆ. ರಾಜಕೀಯ ಪಕ್ಷಗಳು ಬೂತ್ ಮಟ್ಟದ ಏಜೆಂಟರುಗಳನ್ನು ನಿಯೋಜಿಸಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮನವಿ ಮಾಡಿದರು.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊರಜಿಲ್ಲೆಗಳಿಂದ ಉದ್ಯೋಗವನ್ನು ಅರಸಿ ಬಂದು ಇಲ್ಲಿಯೇ ವೃತ್ತಿಯನ್ನು ಕೈಗೊಂಡು ಕಳೆದ ನಾಲ್ಕೈದು ವಷರ್ಗಳಿಂದ ವಾಸವಿರುವವರ ಹೆಸರುಗಳನ್ನು ಸೇರ್ಪಡೆ ಮಾಡಬಹುದು. ಆದರೆ ಈ ಹಿಂದೆ ತಮ್ಮ ಸ್ವಂತ ಊರಿನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದಲ್ಲಿ ಅದನ್ನು ತೆಗೆದುಹಾಕಲು ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದರು.
18 ವರ್ಷ ತುಂಬಿದ ಪ್ರತಿಯೊಬ್ಬ ಅರ್ಹ ಮತದಾರ ತನ್ನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಅರ್ಹ ದಾಖಲೆಗಳನ್ನು ನೀಡಿ ದಾಖಲಿಸಲು ಹಾಗೂ ವಿಶೇಷ ಮತದಾರರ ನೋಂದಣಿ ಆಂದೋಲನ ದಿನಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು ಎಂದ ಡಾ.ರೇಜು, ಸರ್ವಿಸ್ ವೋಟರ್ಸ್ಗಳ ನೊಂದಣಿಗೂ ಸಹ ಆದ್ಯತೆ ನೀಡಬೇಕು ಎಂದರು.
ಆನ್ಲೈನ್ ಮೂಲಕ ಅಥವಾ ನೇರವಾಗಿ ಮತದಾರರ ನೋಂದಣಿ ಸೇರಿದಂತೆ ಬೇರೆ ಉದ್ದೇಶಗಳಿಗೆ ಅರ್ಜಿಗಳನ್ನು ಸಲ್ಲಿಸಿದಾಗ ಅವುಗಳ ಬಗ್ಗೆ ವಿಳಂಬಲ್ಲದೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಕೈಗೊಂಡಿರುವ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ತಾಲೂಕು ತಹಶೀಲ್ದಾರ್ಗಳು, ವಿವಿಧ ಪಕ್ಷಗಳ ಏಜೆಂಟರು ಗಳಾದ ಬಿಜೆಪಿಯ ಚಂದ್ರ ಶೇಖರ ಪ್ರಭು, ಕಾಂಗ್ರೆಸ್ನ ಬಿ. ಕುಶಲ್ ಶೆಟ್ಟಿ, ಜೆಡಿಎಸ್ನ ರಾಮರಾವ್, ಸಿಪಿಐನ ಬಾಲಕೃಷ್ಣ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.