ಉಡುಪಿ ಜಿಲ್ಲೆಯಲ್ಲಿ ಮಳೆ-ಗಾಳಿಗೆ 167.63 ಕೋಟಿ ರೂ. ನಷ್ಟದ ಅಂದಾಜು
ಉಡುಪಿ: ಜಿಲ್ಲೆಯಲ್ಲಿ ಈ ಬಾರಿ ವಾಡಿಕೆ ಮಳೆಗಿಂತ ಅಧಿಕ ಮಳೆಯಾಗಿದ್ದರೂ, ಮಳೆಯೊಂದಿಗೆ ಗಾಳಿಯೂ ಸೇರಿದ್ದರಿಂದ ಆಗಿರುವ ಹಾನಿಯ ಪ್ರಮಾಣವೂ ಅತ್ಯಧಿಕವಾಗಿದೆ. ಪ್ರಸ್ತುತ ವರ್ಷದ ಎಪ್ರಿಲ್‌ನಿಂದ ಈವರೆಗೆ ಹಾನಿಯಾದ ಮೂಲಸೌಕರ್ಯಗಳ ಅಂದಾಜು ನಷ್ಟ 167.63 ಕೋಟಿ ರೂ.ಗಳೆಂದು ಲೆಕ್ಕ ಹಾಕಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ನೀಡಿರುವ ಮಾಹಿತಿಯಂತೆ ಮುಂಗಾರು ಮಳೆಯಿಂದಾಗಿ ಜಿಲ್ಲೆಯಲ್ಲಿ 40 ಮನೆಗಳು ಸಂಪೂರ್ಣ ಹಾಗೂ 541 ಮನೆಗಳಿಗೆ ಭಾಗಶ: ಹಾನಿಯಾಗಿದೆ. ಇದರೊಂದಿಗೆ 59 ದನದ ಕೊಟ್ಟಿಗೆಗಳಿಗೂ ಹಾನಿಯಾಗಿದೆ. 62.3 ಹೆಕ್ಟೇರ್ ತೋಟಗಾರಿಕಾ ಬೆಳೆಗಲಿಗೆ, 141.39 ಹೆಕ್ಟೇರ್ ಕೃಷಿ ಬೆಳೆಗೂ ಹಾನಿಯುಂಟಾಗಿದೆ. ಭತ್ತದ ಕೃಷಿ ಭೂಮಿ ಈಗಲೂ ಜಲಾವೃತವಾಗಿದ್ದು ಅವುಗಳಿಗಾದ ಹಾನಿಯನ್ನು ಇನ್ನಷ್ಟೇ ಅಂದಾಜಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ಈವರೆಗೆ ಅಂದಾಜಿಸಲಾಗಿರುವ ಹಾನಿಗಳಲ್ಲಿ 38.02 ಕಿ.ಮೀ. ರಾಜ್ಯ ಹೆದ್ದಾರಿಗೆ 40.15 ಕೋಟಿ ರೂ., 82.24ಕಿ.ಮೀ. ಉದ್ದದ ಜಿಲ್ಲಾ ಮುಖ್ಯ ರಸ್ತೆಗಳಿಗಾದ ಹಾನಿಯ ಪ್ರಮಾಣ 67.31 ಕೋಟಿ ರೂ.ಗಳಾದರೆ, 712.92ಕಿ.ಮೀ. ಗ್ರಾಮೀಣ ರಸ್ತೆಗಳಿಗೆ 5.63 ಕೋಟಿ ರೂ. ಹಾಗೂ 212.3ಕಿ.ಮೀ. ನಗರ ರಸ್ತೆಗಳಿಗೆ 14.54 ಕೋಟಿ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಜಿಲ್ಲೆಯ 69 ಸೇತುವೆ ಹಾಗೂ ಕಲ್ವರ್ಟ್‌ಗಳು ಮಳೆ-ಗಾಳಿಗೆ ಹಾನಿಗೊಂಡಿದ್ದು 30.05 ಕೋಟಿ ರೂ. ನಷ್ಟವಾಗಿದೆ. ಇನ್ನು ಮೆಸ್ಕಾಂನ 4573 ವಿದ್ಯುತ್ ಸರಬರಾಜು ಕಂಬಗಳಿಗೆ 7.12 ಕೋಟಿ ರೂ., 21 ಟ್ರಾನ್ಫರ್‌ಮರ್ ಗಳಿಗೆ 41.50 ಲಕ್ಷ ರೂ., ಹಾಗೂ 82.45ಕಿ.ಮೀ. ಉದದದ ವಿದ್ಯುತ್ ಸರಬರಾಜು ಲೈನ್‌ಗಳಿಗೆ 57.47 ಲಕ್ಷ ರೂ. ನಷ್ಟವಾಗಿರುವ ಮಾಹಿತಿ ಸಿಕ್ಕಿದೆ.
ಇನ್ನುಳಿದಂತೆ 34 ಸರಕಾರಿ ಕಟ್ಟಡಗಳು ಪ್ರಾಥಮಿಕ ಶಾಲಾ ಕಟ್ಟಡಗಳಿಗೆ 1.28 ಕೋಟಿ ರೂ., ಒಂದು ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಕ್ಕೆ 3.50 ಲಕ್ಷ ರೂ., 20 ಅಂಗನವಾಡಿ ಕೇಂದ್ರಗಳಿಗೆ 49 ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಮೂಲಸೌಕರ್ಯ ಗಳಿಗೆ ಒಟ್ಟು 167.63 ಕೋಟಿ ರೂ.ನಷ್ಟವಾಗಿದೆ.
ಮುಂಗಾರು ಹಾಗೂ ಮುಂಗಾರು ಪೂರ್ವ ಮಳೆಯ ಅವಧಿಯಲ್ಲಿ ಸಿಡಿಲು ಸೇರಿದಂತೆ ಒಟ್ಟು ಐದು ಮಾನವ ಜೀವಹಾನಿ ಯಾಗಿದ್ದು ತಲಾ ಐದು ಲಕ್ಷ ರೂ.ಪರಿಹಾರವನ್ನು ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಾದ ಹಾನಿಗಳಿಗೆ ಸಂಬಂಧಿಸಿದಂತೆ ಸರಕಾರದ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ಪಾವತಿಸಲಾಗಿದ್ದು, ಇದುವರೆಗೆ ಒಟ್ಟು 57.67 ಲಕ್ಷ ರೂ.ಗಳನ್ನು ಪರಿಹಾರವಾಗಿ ಸಂತ್ರಸ್ಥರಿಗೆ ಪಾವತಿಸಲಾಗಿದೆ.
ಮಳೆಯಿಂದ ಹಾನಿಗೊಳಗಾದ 57 ಕಾಲುಸಂಕಗಳ ದುರಸ್ಥಿ ಹಾಗೂ ಹೊಸ ಕಾಲುಸಂಕಗಳ ನಿರ್ಮಾಣಕ್ಕಾಗಿ ಏಳೂವರೆ ಕೋಟಿ ರೂ.ಗಳ ಅನುದಾನದ ಬಿಡುಗಡೆಗೆ ಲೋಕೋಪಯೋಗಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಅದೇ ರೀತಿ ತುರ್ತು ಸಮುದ್ರ ಕೊರೆತ ತಡೆಗೋಡೆ ನಿರ್ಮಾಣ ಕಾಮಗಾರಿಗೂ ಎರಡು ಕೋಟಿ ರೂ.ಗಳ ಅನುದಾನ ಬಿಡುಗಡೆಗೆ ಸರಕಾರವನ್ನು ಕೋರಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜುಲೈ ತಿಂಗಳಲ್ಲಿ ಶೇ.41ರಷ್ಟು ಅಧಿಕ ಮಳೆ
ಕಳೆದ ಬಾರಿಯ ಕೊರತೆಗೆ ಈ ಬಾರಿ ಅಧಿಕ ಮಳೆಯ ಉತ್ತರ
ಕೇಂದ್ರ ಹವಾಮಾನ ಇಲಾಖೆ ಮಳೆಯ ಕುರಿತಂತೆ ಈ ಬಾರಿ ನುಡಿದ ಭವಿಷ್ಯ ನಿಜವಾಗಿದೆ. ಈ ಬಾರಿ ವಾಡಿಕೆ ಮಳೆಗಿಂತ ಅಧಿಕ ಮಳೆಯಾಗಲಿದೆ ಎಂಬ ಅದರ ಭವಿಷ್ಯ ಉಡುಪಿ ಜಿಲ್ಲೆಯ ಮಟ್ಟಿಗಂತೂ ಮಳೆಗಾಲದ ಎರಡು ತಿಂಗಳ ಕೊನೆಗೆ ಸರಿಯಾಗಿದೆ. ಅರಬಿ ಸಮುದ್ರದ ಮಡಿಲಿನಲ್ಲಿ, ಪಶ್ಚಿಮ ಘಟ್ಟದ ತಪ್ಪಲಲ್ಲಿದ್ದರೂ ಕಳೆದ ವರ್ಷ ಜಿಲ್ಲೆಯ ಕಾರ್ಕಳ, ಹೆಬ್ರಿ, ಬ್ರಹ್ಮಾವರ ತಾಲೂಕುಗಳು ಬರಪೀಡಿತ ತಾಲೂಕುಗಳಾಗಿ ಗುರುತಿಸಿಕೊಂಡಿದ್ದವು. ಆದರೆ ಈ ಬಾರಿ ಅಂಥ ಒಂದು ಸಾಧ್ಯತೆ ಕಡಿಮೆ ಎಂಬುದು ಈವರೆಗಿನ ಮಳೆಯ ಅವಲೋಕನದಿಂದ ಖಚಿತವಾಗುತ್ತದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಮಾಹಿತಿಯಂತೆ ಉಡುಪಿ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ.41ರಷ್ಟು ಅಧಿಕ ಮಳೆ ಸುರಿದಿದೆ. ಜುಲೈ ತಿಂಗಳಲ್ಲಿ ಜಿಲ್ಲೆಯ ವಾಡಿಕೆ ಮಳೆ 1448 ಮಿ.ಮೀ. ಆಗಿದ್ದರೆ ಈ ಬಾರಿ ಜು.31ರವರೆಗೆ 2047 ಮಿ.ಮೀ. ಮಳೆಯಾಗುವ ಮೂಲಕ ಶೇ.41ರಷ್ಟು ಅಧಿಕ ಮಳೆಯಾಗಿದೆ.
ಇನ್ನು ಮಳೆಗಾಲದ ಎರಡು ತಿಂಗಳು (ಜೂನ್1ರಿಂದ ಜು.31) ಅವಧಿಯ ಮಳೆಯನ್ನು ಪರಿಗಣನೆಗೆ ತೆಗೆದುಕೊಂಡರೆ ಅಲ್ಲೂ ಶೇ.17ರಷ್ಟು ಮಳೆಯಾಗಿರುವುದು ಕಂಡುಬಂದಿದೆ. ಈ ಅವಧಿಯ ವಾಡಿಕೆ ಮಳೆ 2554ಮಿ.ಮೀ. ಆಗಿದ್ದರೆ ಇಂದಿನವರೆಗೆ 2976ಮಿ.ಮೀ. ಮಳೆಯಾಗಿದೆ.
ಈ ವರ್ಷದ ಜನವರಿ 1ರಿಂದ ಜುಲೈ 31ರ ಅವಧಿಯಲ್ಲಿ ಬಿದ್ದ ಮಳೆಯ ಲೆಕ್ಕವನ್ನು ನೋಡಿದರೂ ಶೇ.19ರಷ್ಟು ಹೆಚ್ಚುವರಿ ಮಳೆ ಬಿದ್ದಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಬೀಳಬೇಕಿದ್ದ ವಾಡಿಕೆ ಮಳೆ 2754ಮಿ.ಮೀ. ಆಗಿದ್ದರೆ ಈ ಬಾರಿ 3278ಮಿ.ಮೀ.ನಷ್ಟು ಮಳೆಯಾಗಿದೆ ಎಂಬುದು ಅಂಕಿಅಂಶಗಳಿಂದ ತಿಳಿದುಬರುತ್ತದೆ.
ಆದರೆ ಕಳೆದ ಜೂನ್ ತಿಂಗಳ ಕೊನೆಗೆ ಪರಿಸ್ಥಿತಿ ಹೀಗಿರಲಿಲ್ಲ. ಜೂನ್ ತಿಂಗಳಲ್ಲಿ ಶೇ.16ರಷ್ಟು ಕೊರತೆ ಕಂಡುಬಂದಿತ್ತು. ಆಗ ಇಡೀ ಮಳೆಗಾಲವನ್ನು ತೆಗೆದುಕೊಂಡರೆ ಶೇ.15ರಷ್ಟು ಮಳೆ ಕೊರತೆ ಉಂಟಾಗಿತ್ತು. ಆದರೆ ಜುಲೈ ತಿಂಗಳುದ್ದಕ್ಕೂ ಸುರಿದ ಬಿರುಸಿನ ಮಳೆ ಈ ಕೊರತೆಯನ್ನು ನೀಗಿಸುವಲ್ಲಿ ಯಶಸ್ವಿಯಾಗಿದೆ. ಇದೇ ರೀತಿಯಲ್ಲಿ ಮಳೆ ಮುಂದುವರಿದರೆ ಈ ಬಾರಿ ವಾಡಿಕೆಗಿಂತ ಅಧಿಕ ಮಳೆ ಸುರಿಯುವುದರಲ್ಲಿ ಯಾವುದೇ ಸಂಶಯವಿಲ್ಲ.
ಆದರೆ 2023ರಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಜುಲೈ ತಿಂಗಳಲ್ಲಿ ಶೇ.25ರಷ್ಟು ಅಧಿಕ ಮಳೆಯಾಗಿದ್ದು ಬಿಟ್ಟರೆ ಜೂನ್‌ನಿಂದ ಜುಲೈ ಕೊನೆಯವರೆಗೆ ಶೇ.9ರಷ್ಟು ಮಳೆ ಕೊರತೆ ಜಿಲ್ಲೆಯನ್ನು ಬಾಧಿಸಿತ್ತು. ಜನವರಿಂದ 1ರಿಂದ ಜು.31ರವರೆಗಿನ ಲೆಕ್ಕ ತೆಗೆದುಕೊಂಡರೆ ಶೇ.14ರಷ್ಟು ಕೊರತೆ ಇತ್ತು. ಆಗಸ್ಟ್, ಸೆಪ್ಟಂಬರ್ ತಿಂಗಳಲ್ಲೂ ಸಹ ಮಳೆಗೆ ಕೊರತೆಯಾಗಿ ಅಂತಿಮವಾಗಿ ಮಳೆಗಾಲದ ನಾಲ್ಕು ತಿಂಗಳಲ್ಲಿ ಶೇ.22ರಷ್ಟು ಮಳೆ ಕೊರತೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿತ್ತು.
ಈ ಬಾರಿ ಈಗಾಗಲೇ ಅಧಿಕ ಮಳೆಯಾಗಿರುವುದರಿಂದ ಹವಾಮಾನ ಕೇಂದ್ರದ ವರದಿಯಂತೆ ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲೂ ಮಳೆಗೆ ಕೊರತೆಯಾಗುವ ಸಾಧ್ಯತೆ ಕಡಿಮೆ ಇದೆ.