ಕುಂದಾಪುರ: ಡಿ.22ರಿಂದ ಸುವರ್ಣ ಜೇಸಿಸ್ ನಾಟಕೋತ್ಸವ
ಉಡುಪಿ, ಡಿ.18: ಜೇಸಿಐ ಕುಂದಾಪುರ ಇದರ ಸ್ಥಾಪನೆಯ 50ನೇ ವರ್ಷದ ಸಂಭ್ರಮದ ಪ್ರಯುಕ್ತ ಡಿ.22ರಿಂದ 26ರವರೆಗೆ ‘ಸುವರ್ಣ ಜೇಸಿಸ್ ನಾಟಕೋತ್ಸವ’ವನ್ನು ಪ್ರತಿದಿನ ಸಂಜೆ 7:30ಕ್ಕೆ ಕುಂದಾಪುರ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕುಂದಾಪುರ ಜೇಸಿಸ್ನ ಅಧ್ಯಕ್ಷ ಚಂದನ್ ಗೌಡ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.22ರ ಸಂಜೆ 6:30ಕ್ಕೆ ಸುವರ್ಣ ನಾಟಕೋತ್ಸವ ವನ್ನು ಶಾಸಕ ಕಿರಣ್ಕುಮಾರ್ ಕೊಡ್ಗಿ ಅವರು ಉದ್ಘಾಟಿಸಲಿದ್ದಾರೆ. ಉದ್ಯಮಿ ದಿನೇಶ್ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ನಾಟಕೋತ್ಸವದ ಮೊದಲ ದಿನ ಸಂಜೆ 7:30ಕ್ಕೆ ರಂಗ ಸಂಗಾತಿ ನಾಟಕ ತಂಡದಿಂದ ಶಶಿರಾಜ್ ಕಾವೂರು ರಚಿಸಿ, ನಿರ್ದೇಶಿಸಿದ ‘ದಟ್ಸ್ ಆಲ್ ಯುವರ್ ಆನರ್’ ನಾಟಕ ಪ್ರದರ್ಶನಗೊಳ್ಳಲಿದೆ. ಡಿ.23ರ ಸೋಮವಾರ ಭೂಮಿಕಾ ಹಾರಾಡಿ ತಂಡದಿಂದ ಬಿ.ಎಸ್.ರಾಮ್ ಶೆಟ್ಟಿ ನಿರ್ದೇಶನದಲ್ಲಿ ಶಶಿರಾಜ್ ಕಾವೂರು ಅವರ ‘ಬರ್ಬರಿಕ’ ನಾಟಕ ಪ್ರದರ್ಶನ ಗೊಳ್ಳಲಿದೆ.
ಡಿ.24ರ ಮಂಗಳವಾರ ನೀನಾಸಂ, ಹೆಗ್ಗೋಡು ತಂಡದಿಂದ ಭವಭೂತಿ ರಚನೆಯ, ಅಕ್ಷರ ಕೆ.ವಿ ರೂಪಾಂತರಿಸಿ, ನಿರ್ದೇಶಿಸಿದ ‘ಮಾಲತೀ ಮಾಧವ’ ನಾಟಕ ಪ್ರದರ್ಶನಗೊಳ್ಳಲಿದೆ. 25ರಂದು ಸಂಜೆ ನೀನಾಸಂ ಹೆಗ್ಗೋಡು ತಂಡ ಮರಾಠಿ ಮೂಲದ ಜಯಂತ್ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿರುವ ‘ಅಂಕದ ಪರದೆ’ ನಾಟಕವನ್ನು ವಿದ್ಯಾನಿಧಿ ವನಾರಸೆ ನಿರ್ದೇಶನದಲ್ಲಿ ಪ್ರದರ್ಶಿಸಲಿದೆ.
ಕೊನೆಯ ದಿನವಾದ ಡಿ.26ರ ಗುರುವಾರ ಸಂಜೆ ಕುವೆಂಪು ಅವರ ರಾಮಾಯಣ ದರ್ಶನಂ ಕೃತಿಯ ಆಧಾರದಲ್ಲಿ ರಂಗ ಪ್ರಯೋಗ ‘ದಶಾನನ ಸ್ವಪ್ನ ಸಿದ್ಧಿ’ ನಾಟಕ ಮಂಗಳೂರಿನ ಭಳಿರೇ ವಿಚಿತ್ರಂ ತಂಡದಿಂದ ಮಂಜು ಕೊಡಗು ನಿರ್ದೇಶನ ದಲ್ಲಿ ಪ್ರಸ್ತುತಗೊಳ್ಳಲಿದೆ ಎಂದು ಚಂದನ್ ಗೌಡ ತಿಳಿಸಿದರು.
ಜೇಸಿಐ ಕುಂದಾಪುರದ 50ನೇ ವರ್ಷಾಚರಣೆ ನಾಟಕೋತ್ಸವದೊಂದಿಗೆ ಪ್ರಾರಂಭಗೊಳ್ಳಲಿದ್ದು, ಒಂದು ವರ್ಷ ಕಾಲ ಮುಂದುವರಿಯಲಿದೆ. ಪ್ರತಿ ತಿಂಗಳು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಚಂದನ್ಗೌಡ ತಿಳಿಸಿದರು.
ನಾಟಕವನ್ನು ಕೊನೆಯ ತನಕ ನೋಡಿದವರಿಗೆ ಅದೃಷ್ಟ ಚೀಟಿಯ ಮೂಲಕ ಬೆಳ್ಳಿ ನಾಣ್ಯಗಳ ಬಹುಮಾನವನ್ನು ಪ್ರತಿದಿನ ನೀಡಲಾಗುವುದು ಎಂದವರು ತಿಳಿಸಿದರು. ಸುದ್ಧಿಗೋಷ್ಠಿಯಲ್ಲಿ ಜೇಸಿಐನ ಪೂರ್ವಾಧ್ಯಕ್ಷ ನರಸಿಂಹ ಐತಾಳ್, ಸಭಾಪತಿ ರಾಕೇಶ್ ಶೆಟ್ಟಿ, ಶರ್ಮಿಳಾ ಕಾರಂತ್ ಉಪಸ್ಥಿತರಿದ್ದರು.