ಕುಂದಾಪುರ: ಸಿಪಿಎಂ 24ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯ ಬಿಡುಗಡೆ

ಕುಂದಾಪುರ, ಫೆ.18: ತಮಿಳುನಾಡಿನ ಮಧುರೈನಲ್ಲಿ ಎಪ್ರಿಲ್ 2ರಿಂದ 6ವರೆಗೆ ಐದು ದಿನಗಳ ಕಾಲ ನಡೆಯುವ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ)ದ ಮಹಾಧಿವೇಶನದಲ್ಲಿ ಅಂಗೀಕರಿಸಬೇಕಾದ ಕರಡು ರಾಜಕೀಯ ನಿರ್ಣಯವನ್ನು ಇಂದು ಹಂಚು ಕಾರ್ಮಿಕರ ಭವನದಲ್ಲಿ ಸಿಪಿಎಂ ಕುಂದಾಪುರ ತಾಲೂಕು ಸಮಿತಿ ಸದಸ್ಯರ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.
ಸಿಪಿಎಂ ಪಕ್ಷ ತನ್ನ ಆಂತರಿಕ ಪ್ರಜಾಪ್ರಭುತ್ವವನ್ನು ಕಟ್ಟುನಿಟ್ಟಿನಿಂದ ಆಚರಿಸುವ ಒಂದು ರಾಜಕೀಯ ಪಕ್ಷವಾಗಿದೆ. ಇದರಲ್ಲಿ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ. ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಪಕ್ಷದ ಮಹಾಧಿವೇಶನಕ್ಕೆ ಮೂರು ತಿಂಗಳ ಮೊದಲು ಕರಡು ರಾಜಕೀಯ ನಿರ್ಣಯವನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಲಾಗುತ್ತದೆ. ಈ ನಿರ್ಣಯವನ್ನು ವಿವಿಧ ರಾಜ್ಯಗಳು ತಮ್ಮ ಭಾಷೆಗಳಿಗೆ ಅನುವಾದ ಮಾಡಿ ಚರ್ಚಿಸಿ ತಿದ್ದುಪಡಿಗಳನ್ನು ಸಲಹೆಗಳನ್ನು ನೇರವಾಗಿ ಅಖಿಲ ಭಾರತ ಸಮಿತಿಗಳಿಗೆ ಕಳುಹಿಸಬಹುದು ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಮಹಾಂತೇಶ್ ಹೇಳಿದರು.
ಈ ರೀತಿ ಬಂದ ಸಲಹೆ ಅಭಿಪ್ರಾಯಗಳನ್ನು ಮಹಾಧಿವೇಶನದಲ್ಲಿ ಪ್ರತಿನಿಧಿಗಳ ಚರ್ಚೆಯ ಆಧಾರದ ಮೇಲೆ ನಿರ್ಣಯವನ್ನು ಮತ್ತೊಮ್ಮೆ ನವೀಕರಿಸಲಾಗುತ್ತದೆ. ಹೀಗೆ ಒಪ್ಪಿಕೊಂಡ ರಾಜಕೀಯ ರೇಖೆಯೇ ತಳ ಮಟ್ಟದವರೆಗೂ ಮುಂದಿನ 3 ವರ್ಷಗಳ ಚಟುವಟಿಕೆಗಳಿಗೆ ಆಧಾರವಾಗಲಿದೆ. ಪಕ್ಷದ ರಾಜಕೀಯ ಕಾರ್ಯತಂತ್ರದ ನಿಲುವನ್ನು ರೂಪಿಸುವಲ್ಲಿ, ಪಕ್ಷದೊಳಗಿನ ಈ ಆಂತರಿಕ ಪ್ರಜಾಸತ್ತಾತ್ಮಕ ಕಸರತ್ತು ಸಿಪಿಎಂ ವಿಶಿಷ್ಟತೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ರಾಜ್ಯ ಸಮಿತಿ ವಿಶೇಷ ಆಹ್ವಾನಿತರಾದ ಬಾಲಕೃಷ್ಣ ಶೆಟ್ಟಿ, ತಾಲೂಕು ಕಾರ್ಯದರ್ಶಿ ಚಂದ್ರಶೇಖರ ವಿ., ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್.ನರಸಿಂಹ, ರಾಜೀವ ಪಡುಕೋಣೆ, ಪಕ್ಷದ ಹಿರಿಯ ಮುಖಂಡರಾದ ಕೆ.ಶಂಕರ್, ವಿ.ನರಸಿಂಹ, ಮಹಾಬಲ ವಡೇರಹೋಬಳಿ ಮೊದಲಾದವರು ಉಪಸ್ಥಿತರಿದ್ದರು.