ಉಡುಪಿ: ಎ.29ಕ್ಕೆ ಅಂತರಜಿಲ್ಲಾ ಚೆಸ್ ಪಂದ್ಯಕೂಟ

ಉಡುಪಿ, ಎ.25: ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘವು, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್‌ನ ಸಹಭಾಗಿತ್ವದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಅಂತರಜಿಲ್ಲಾ ಚೆಸ್ ಪಂದ್ಯಕೂಟವನ್ನು ಎ.29ರ ಮಂಗಳವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಕೂಟವನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಿದ್ದಾರೆ. ಶಾಸಕ ಯಶಪಾಲ್ ಸುವರ್ಣ, ಜಿಲ್ಲಾ ಚೆಸ್ ಅಸೋಸಿಯೇಷನ್‌ನ ಗೌರವ ಅಧ್ಯಕ್ಷ ಡಾ.ರಾಜಗೋಪಾಲ ಶೆಣೈ, ಅಧ್ಯಕ್ಷ ಉಮಾನಾಥ ಕಾಪು ಮತ್ತಿರರು ಉಪಸ್ಥಿತ ರಿರುವರು ಎಂದರು.
ಪಂದ್ಯಕೂಟ ಬೆಳಗೆಗ 8:30ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಸ್ಪರ್ಧೆಗಳು ಒಟ್ಟು ಆರು ವಿಭಾಗಗಳಲ್ಲಿ- 7ವರ್ಷದೊಳಗೆ, 9ವರ್ಷದೊಳಗೆ, 11 ವರ್ಷದೊಳಗೆ, 13ವರ್ಷದೊಳಗೆ, 16 ವರ್ಷದೊಳಗೆ ಹಾಗೂ ಮುಕ್ತ ವಿಭಾಗ- ನಡೆಯಲಿವೆ. ಪ್ರವೇಶ ಶುಲ್ಕ ವಯೋಮಿತಿ ವಿಭಾಗಗಳಿಗೆ 500ರೂ. ಹಾಗೂ ಮುಕ್ತ ವಲಯಕ್ಕೆ 700ರೂ. ಎಂದರು.
ಹೆಸರು ನೊಂದಣಿಗೆ ಎ.27 ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗೆ ಮೊಬೈಲ್ ನಂ.:7019191835, 9448501387ನ್ನು ಸಂಪರ್ಕಿಸಬಹುದು. ಮುಕ್ತ ವಿಭಾಗದಲ್ಲಿ ಪ್ರಥಮ 15 ಸ್ಥಾನ ಪಡೆಯುವವರಿಗೆ ಹಾಗೂ ವಯೋಮಿತಿ ವಿಭಾಗದಲ್ಲಿ ಮೊದಲ 10 ಸ್ಥಾನ ಪಡೆಯುವವರಿಗೆ ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ ಎಂದು ಮಂಜುನಾಥ ಮಣಿಪಾಲ ತಿಳಿಸಿದರು.
ಮುಕ್ತ ವಿಭಾಗದಲ್ಲಿ ಪ್ರಥಮ ಬಹುಮಾನ 5,000ರೂ. ದ್ವಿತೀಯ 3,000, ತೃತೀಯ 2,000ರೂ. ಹಾಗೂ 4ರಿಂದ 10ನೇ ಸ್ಥಾನದವರೆಗೆ ತಲಾ 1,000ರೂ. ನಗದು, ಪ್ರಮಾಣ ಪತ್ರ ಮತ್ತು ಟ್ರೋಫಿ ಇರುತ್ತದೆ. ವಯೋಮಿತಿ ವಿಭಾಗದಲ್ಲಿ ಮೊದಲ 7 ಸ್ಥಾನ ಪಡೆಯುವ ಬಾಲಕಿಯರಿಗೆ ಪ್ರಶಸ್ತಿ ಇರುತ್ತದೆ. ಅಲ್ಲದೇ ಇಬ್ಬರು ಹಿರಿಯ ಆಟಗಾರರಿಗೆ, ಉಡುಪಿ ಜಿಲ್ಲೆಯ ಒಬ್ಬ ಅತ್ಯುತ್ತಮ ಆಟಗಾರನಿಗೆ ವಿಶೇಷ ಬಹುಮಾನವಿರುತ್ತದೆ ಎಂದರು.
ಈವರೆಗೆ 50ಕ್ಕೂ ಅಧಿಕ ಮಂದಿ ಸ್ಪರ್ಧೆಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಸುಮಾರು 200ರಿಂದ 250 ಮಂದಿ ಸ್ಪರ್ಧಾಕೂಟದಲ್ಲಿ ಭಾಗವಹಿ ಸುವ ನಿರೀಕ್ಷೆ ಸಂಘಟಕರಿಗಿದೆ ಎಂದು ಮಂಜುನಾಥ ಮಣಿಪಾಲ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಮಾನಾಥ ಕಾಪು, ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ರೋಶನ್ ಕರ್ಕಡ ಕಾಪು, ಸ್ಥಾಪಕ ಅಧ್ಯಕ್ಷ ಪ್ರಭಾಕರ ಕೆ., ಉಪಾಧ್ಯಕ್ಷ ವಿನಯಕುಮಾರ್ ಕಲ್ಮಾಡಿ, ಮಧುಸೂಧನ್ ಕನ್ನರ್ಪಾಡಿ, ನವೀನ್ ಉದ್ಯಾವರ, ಶ್ರೀಕೃಷ್ಣ ಕಟಪಾಡಿ ಮುಂತಾದವರು ಉಪಸ್ಥಿತರಿದ್ದರು.