ಉಡುಪಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಮಹಿಳೆಯರಿಂದ ಅಧಿಕ ಮತದಾನ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
ಫೈಲ್ ಫೋಟೊ
ಉಡುಪಿ: ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆದ 28 ಲೋಕಸಭಾ ಕ್ಷೇತ್ರದ ಮತದಾನ ಮುಗಿದು ಇದೀಗ ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ರಾಜ್ಯದ ಜನತೆ ಕಾಯುತಿದೆ. ಕಳೆದ ವಿಧಾನಸಭಾ ಚುನಾವಣೆಯ ವೇಳೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನದಂತೆ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಆಡಳಿತ ಕಾಂಗ್ರೆಸ್ ಪಕ್ಷ ಅದರ ಆಧಾರದಲ್ಲೇ ಈ ಬಾರಿ ಅಧಿಕ ಸ್ಥಾನ ಗೆಲ್ಲುವ ಸಂಪೂರ್ಣ ವಿಶ್ವಾಸದೊಂದಿಗೆ ಫಲಿತಾಂಶಕ್ಕಾಗಿ ಕಾಯುತ್ತಿದೆ.
ಗೃಹಲಕ್ಷಿ, ರಾಜ್ಯಾದ್ಯಂತ ರಾಜ್ಯ ಸಾರಿಗೆಯಲ್ಲಿ ಉಚಿತ ಪ್ರಯಾಣದ ಕೊಡುಗೆಯ ಮೂಲಕ ರಾಜ್ಯದ ಮಹಿಳೆಯರು ಈ ಬಾರಿ ತಮ್ಮ ಕೈ ಹಿಡಿಯಲಿದ್ದಾರೆ ಎಂಬುದೇ ಆಡಳಿತ ಪಕ್ಷದ ತುಂಬು ವಿಶ್ವಾಸಕ್ಕೆ ಬುನಾದಿ ಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅನುಷ್ಠಾನಗೊಳಿಸಿರುವ ಐದು ಗ್ಯಾರಂಟಿಗಳಲ್ಲಿ ಮಹಿಳೆಯರೇ ಪ್ರಧಾನ ಫಲಾನುಭವಿ ಗಳಾಗಿರುವುದು ಇದಕ್ಕೆ ಕಾರಣವೆನ್ನಬಹುದು.
ಈ ಹಿನ್ನೆಲೆಯಲ್ಲಿ ಈ ಬಾರಿ ನಡೆದ ಲೋಕಸಭಾ ಚುನಾವಣೆಯ ಮತದಾನವನ್ನು ವಿಶ್ಲೇಷಿಸಿದಾಗ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಉತ್ಸಾಹದಿಂದ ಮತ ಹಾಕಿರುವುದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಂಡುಬಂದಿಲ್ಲ. ಪುರುಷರಿಗಿಂತ ಮಹಿಳೆಯರೇ ಅಧಿಕ ಮತದಾರರಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿಯೂ ಮಹಿಳೆಯ ರಿಗಿಂತ ಪುರುಷರೇ ಅಧಿಕ ಮತ ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿರುವ 7,68,215 ಪುರುಷ ಮತದಾರರ ಪೈಕಿ 5,94,565 ಮಂದಿ ಮತ ಚಲಾಯಿಸಿದ್ದು ಶೇ.77.40ರಷ್ಟು ಮಂದಿ ಮತ ಹಾಕಿದ್ದಾರೆ.
ಕ್ಷೇತ್ರದಲ್ಲಿರುವ ಒಟ್ಟು ಮಹಿಳಾ ಮತದಾರರ ಸಂಖ್ಯೆ 8,16,910 ಆಗಿದ್ದರೆ, ಇವರಲ್ಲಿ 6,28,316 ಮಂದಿ ಮತ ಹಾಕಿದ್ದು, ಇದು ಒಟ್ಟಾರೆಯಾಗಿ ಶೇ.76.91 ಆಗಿದೆ. ಈ ಮೂಲಕ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 15,85,162 ಆಗಿದ್ದು, ಇವರಲ್ಲಿ 12,22,888 ಮಂದಿ ಎ.26ರಂದು ಮತ ಚಲಾಯಿಸಿದ್ದು, ಇದು ಶೇ.77.15 ಆಗಿದೆ. ಕಳೆದ ಬಾರಿಗೆ ಹೋಲಿಸಿದರೆ ಶೇ.1.08ರಷ್ಟು ಅಧಿಕ ಮತದಾನವಾಗಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳ ಮತದಾರರ ಪೈಕಿ ಮಹಿಳೆ ಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ ಕೇವಲ ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಕಾಪು ಕ್ಷೇತ್ರಗಳಲ್ಲಿ ಮಾತ್ರ ಪುರುಷರಿಗಿಂತ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಇದು ಕಳೆದ ಬಾರಿಗೆ ಹೋಲಿಸಿದರೆ ಕಳಪೆ ಎನ್ನಬಹುದು.
2019ರ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲೂ ಮಹಿಳೆಯರೇ ಅದಿಕ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದರು. ಚಿಕ್ಕಮಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಕಳೆದ ಬಾರಿಯಂತೆ ಈ ಬಾರಿಯೂ ಮಹಿಳೆಯರಿಗಿಂತ ಪುರುಷರೇ ಅಧಿಕ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಹೀಗಾಗಿ ಎರಡೂ ಜಿಲ್ಲೆಗಳ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆಯರು ಉತ್ಸಾಹದಿಂದ ಅಧಿಕ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿರುವುದು ಕರಾವಳಿಯ ಮಟ್ಟಿಗೆ ಕಂಡುಬರುತ್ತಿಲ್ಲ.
ಕಳೆದ ಎ.26ರಂದು ನಡೆದ ಮತದಾನದ ವೇಳೆ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಮಾಡಿದ ಪುರುಷ ಮತ್ತು ಮಹಿಳಾ ಮತದಾರರ ವಿವರ ಹೀಗಿದೆ.
ಕುಂದಾಪುರ: ಪುರುಷರು: 1,01,904(ಮತ ಚಲಾಯಿಸಿದವರು 79,132-ಶೇ.77.65) ಮಹಿಳೆಯರು: 1,09,932 (88,478- ಶೇ.80.48), ಇತರೇ: 02(02), ಒಟ್ಟು: 2,11,838 (1,67,612) ಶೇ. 79.12.
ಉಡುಪಿ: ಪುರುಷರು: 1,06,680(82,602-77.43), ಮಹಿಳೆಯರು: 1,14,603 (89,655-78.23), ಇತರೇ: 02(0), ಒಟ್ಟು: 2,21,285 (1,72,257), ಶೇ.77.84.
ಕಾಪು: ಪುರುಷರು: 92,290(71,586-77.57), ಮಹಿಳೆಯರು: 1,00,304 (80,890-80.64), ಇತರೇ: 5(1), ಒಟ್ಟು: 1,92,599 (1,52,477), ಶೇ. 79.17.
ಕಾರ್ಕಳ: ಪುರುಷರು: 92,864 (73,352-78.99), ಮಹಿಳೆಯರು: 1,00,648 (80,802-80.28), ಇತರೇ: 0(0), ಒಟ್ಟು: 1,93,512 (1,54,154), ಶೇ. 79.66.
ಶೃಂಗೇರಿ: ಪುರುಷರು: 82,260(67,146-81.63), ಮಹಿಳೆಯರು: 86,690 (68,531-79.05), ಇತರೇ: 01(1), ಒಟ್ಟು: 1,68,951 (1,35,678), ಶೇ. 80.31.
ಮೂಡಿಗೆರೆ: ಪುರುಷರು: 83,298 (66,251-79.53), ಮಹಿಳೆಯರು: 88,339 (66,724-75.53), ಇತರೇ: 05(0), ಒಟ್ಟು: 1,71,642 (1,32,975), ಶೇ. 77.47.
ಚಿಕ್ಕಮಗಳೂರು: ಪುರುಷರು: 1,13,854(81,895-71.93), ಮಹಿಳೆಯರು: 1,18,336(82,357-69.60), ಇತರೇ: 20(1), ಒಟ್ಟು: 2,32,210 (1,64,253), ಶೇ.70.73.
ತರೀಕೆರೆ: ಪುರುಷರು: 95,065 (72,601-76.37), ಮಹಿಳೆಯರು: 98,058 (70,879-72.28), ಇತರೇ: 2(2), ಒಟ್ಟು:1,93,125 (1,43,482), ಶೇ. 74.29.
ಕ್ಷೇತ್ರದ ಸಾಧನೆ: ಪುರುಷರು:7,68,215 (5,94,565 -ಶೇ.77.40), ಮಹಿಳೆಯರು: 8,16,910 (6,28,316-76.91), ಇತರೇ: 37 (07-18.92), ಒಟ್ಟು: 15,85,162 (12,22,888). ಸರಾಸರಿ ಮತದಾನ: ಶೇ. 77.15.
2019ರಲ್ಲಿ ಆದ ಮತದಾನದ ಪ್ರಮಾಣ ಕೆಳಕಂಡಂತಿದೆ.
ಕುಂದಾಪುರ: ಪುರುಷರು-ಶೇ.75.87, ಮಹಿಳೆಯರು- ಶೇ.78.31, ಒಟ್ಟು- ಶೇ.77.66.
ಉಡುಪಿ: ಪುರುಷರು-ಶೇ.78.31, ಮಹಿಳೆಯರು- ಶೇ.79.21, ಒಟ್ಟು- ಶೇ.78,77.
ಕಾಪು: ಪುರುಷರು- ಶೇ.76.76, ಮಹಿಳೆಯರು- ಶೇ.78.94, ಒಟ್ಟು- 77.89.
ಕಾರ್ಕಳ: ಪುರುಷರು-ಶೇ.77.69, ಮಹಿಳೆಯರು-ಶೇ.79.03), ಒಟ್ಟು- ಶೇ.78.39.
ಶೃಂಗೇರಿ: ಪುರುಷರು-ಶೇ.80.24, ಮಹಿಳೆಯರು-ಶೇ.77.52, ಒಟ್ಟು- ಶೇ.78.86.
ಮೂಡಿಗೆರೆ: ಪುರುಷರು-ಶೇ.76.78, ಮಹಿಳೆಯರು-ಶೇ.72.86, ಒಟ್ಟು-ಶೇ.74.79.
ಚಿಕ್ಕಮಗಳೂರು: ಪುರುಷರು-ಶೇ.70.95, ಮಹಿಳೆಯರು-ಶೇ. 67.97, ಒಟ್ಟು- ಶೇ.69.45.
ತರಿಕೆರೆ: ಪುರುಷರು-ಶೇ.74.60, ಮಹಿಳೆಯರು-ಶೇ.69.74, ಒಟ್ಟು -72.18.
ಒಟ್ಟು: ಪುರುಷರು-ಶೇ.76.24, ಮಹಿಳೆಯರು-ಶೇ.75.60, ಒಟ್ಟು- 75.91.