ಉಡುಪಿ: ತ್ರೈಮಾಸಿಕ ಬ್ಯಾಂಕ್ ವ್ಯವಹಾರದಲ್ಲಿ 5676 ಕೋಟಿ ಪ್ರಗತಿ
ಜಿಲ್ಲೆಯ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ
ಉಡುಪಿ, ಡಿ.23: ಜಿಲ್ಲೆಯಲ್ಲಿ ಕಳೆದ ಸೆಪ್ಟಂಬರ್ ಅಂತ್ಯಕೆ ಬ್ಯಾಂಕುಗಳ ಒಟ್ಟು ವ್ಯವಹಾರ 60,519 ಕೋಟಿ ರೂ. ಗಳಾ ಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು 5734 ಕೋಟಿ ರೂ. ಹೆಚ್ಚಳವನ್ನು ತೋರಿಸಿದೆ.ಈ ಮೂಲಕ ಶೇ.10.47ರಷ್ಟು ಪ್ರಗತಿಯನ್ನು ಜಿಲ್ಲೆ ಸಾಧಿಸಿದೆ ಎಂದು ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಎಜಿಎಂ ಶ್ರೀಜಿತ್ ಕೆ. ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ಡಿಸಿಸಿ ಹಾಗೂ ಡಿಎಲ್ಆರ್ಸಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜುಲೈನಿಂದ ಸೆಪ್ಟಂಬರ್ವರೆಗಿನ ಜಿಲ್ಲೆಯ ಬ್ಯಾಂಕುಗಳ ತ್ರೈಮಾಸಿಕ ಪ್ರಗತಿಯ ವರದಿ ಮಂಡಿಸಿ ಅವರು ಮಾತನಾಡುತಿದ್ದರು. ಉಡುಪಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಪ್ರತೀಕ್ ಬಾಯಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಅವಧಿಯಲ್ಲಿ ಸಾಲ ನೀಡಿಕೆಯಲ್ಲಿ 1787 ಕೋಟಿ ರೂ. (ಶೇ.10.06) ಹಾಗೂ ಠೇವಣಿಯಲ್ಲಿ 3947 ಕೋಟಿ ರೂ. (ಶೇ.10.66) ಹೆಚ್ಚಳ ತೋರಿಸಲಾಗಿದೆ. ಇದರಿಂದ ಕಳೆದ ವರ್ಷ ಶೇ.47.92 ಇದ್ದ ಸಾಲ-ಠೇವಣಿ ಅನುಪಾತ (ಸಿಡಿ ರೆಷ್ಯೂ) ಶೇ.47.66ಕ್ಕೆ ಇಳಿದಿದೆ ಎಂದರು.
ಈ ಅವಧಿಯಲ್ಲಿ ವಿವಿಧ ವಲಯಗಳಿಗೆ ಒಟ್ಟಾರೆಯಾಗಿ 7,556 ಕೋಟಿ ರೂ. ಸಾಲವನ್ನು ವಿತರಿಸಿ ಒಟ್ಟು ಗುರಿಯ ಶೇ.60ರಷ್ಟು ಸಾಧನೆ ಮಾಡಲಾಗಿದೆ. ಇವುಗಳಲ್ಲಿ ಎಂಎಸ್ಎಂಇ ವಲಯಕ್ಕೆ 1979 ಕೋಟಿ ರೂ. ಸಾಲ ನೀಡಿ ಶೇ.57.76, ಕೃಷಿ ವಲಯಕ್ಕೆ 1506 ಕೋಟಿ ರೂ.ಸಾಲ ನೀಡಿ ಶೇ.52.53ರಷ್ಟು ಸಾಧನೆ ಮಾಡಲಾಗಿದೆ.
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆಯಲ್ಲಿ 156 ಅರ್ಜಿಗಳಿಗೆ 9.56ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ 16 ಕೋಟಿ ರೂ. ಹಾಗೂ ಗೃಹ ಸಾಲಕ್ಕೆ 77 ಕೋಟಿ ರೂ.ಸಾಲವನ್ನು ನೀಡಲಾಗಿದೆ ಎಂದರು.
ಪಿಎಂ ಸ್ವನಿಧಿ ಯೋಜನೆಯಡಿ ಬ್ಯಾಂಕುಗಳು 16.70 ಕೋಟಿ ರೂ. ಮೊತ್ತದ ಒಟ್ಟು 8800 ಮಂದಿಗೆ ಸಾಲವನ್ನು ಮಂಜೂರು ಮಾಡಿವೆ. ಇವುಗಳಲ್ಲಿ 8646 ಮಂದಿಗೆ ಈಗಾಗಲೇ 15.37 ಕೋಟಿ ರೂ.ಸಾಲವನ್ನು ಬಿಡುಗಡೆ ಮಾಡಲಾ ಗಿದೆ ಎಂದು ಶ್ರೀಜಿತ್ ಕೆ. ತಿಳಿಸಿದರು.
ಜಿಲ್ಲೆಯಲ್ಲಿ ವಿಶೇಷ ನಿಗಾ ಕಾರ್ಯಕ್ರಮಗಳ ಅಡಿಯಲ್ಲಿ ಬ್ಯಾಂಕುಗಳು ದುರ್ಬಲ ವರ್ಗಗಳಿಗೆ 1233 ಕೋಟಿ ರೂ., ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ 82.90 ಕೋಟಿ ರೂ., ವಸತಿ ಕ್ಷೇತ್ರಗಳ ಸುಸ್ಥಿರ ಅಭಿವೃದ್ಧಿಗಾಗಿ 136 ಕೋಟಿ ರೂ.ಗಳ ಸಾಲ ವಿತರಣೆ ಮಾಡಲಾಗಿದೆ ಎಂದರು.
ಜಿಲ್ಲೆಯ ಉದ್ಯಮಗಳನ್ನು ಬೆಂಬಲಿಸುವುದರೊಂದಿಗೆ ಉದ್ಯೋಗಾವಕಾಶ ಸೃಷ್ಟಿಸಲು ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ ನಿಗದಿತ ಗುರಿಯಾದ 131 ಅರ್ಜಿಗಳ ಬದಲು 261 ಅರ್ಜಿಗಳಿಗೆ ಸಾಲ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿ ಇದುವರೆಗೆ 28.34 ಕೋಟಿ ರೂ. ಸಾಲ ವಿತರಿಸಲಾಗಿದೆ. ಬಾಕಿ ಉಳಿದ ಅರ್ಜಿ ಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಿ, ಅರ್ಹ ಫಲಾನುಭವಿ ಉದ್ಯಮಿಗಳಿಗೆ ಸಬ್ಸಿಡಿಯನ್ನು ಶೀಘ್ರವಾಗಿ ವಿತರಿಸು ವಂತೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ 11 ರಾಷ್ಟ್ರೀಕೃತ ಬ್ಯಾಂಕುಗಳ 256 ಶಾಖೆಗಳು, ಖಾಸಗಿ ವಲಯದ 14 ಬ್ಯಾಂಕುಗಳ 93 ಶಾಖೆಗಳು, ಆರ್ಆರ್ಬಿಯ 23 ಶಾಖೆಗಳು, ಸಹಕಾರಿ ವಲಯದ 52 ಶಾಖೆಗಳು ಹಾಗೂ ಸಣ್ಣ ಫೈನಾನ್ಸ್ ಬ್ಯಾಂಕಿನ 3 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 236 ಶಾಖೆಗಳು ಗ್ರಾಮೀಣ ಭಾಗದಲ್ಲಿ, 92 ಅರೆ ಪಟ್ಟಣ ಪ್ರದೇಶದಲ್ಲಿ ಹಾಗೂ 101 ನಗರ ವ್ಯಾಪ್ತಿಯಲ್ಲಿವೆ. ಜಿಲ್ಲೆಯಲ್ಲಿ 491 ಎಟಿಎಂಗಳು ಹಾಗೂ 1015 ಬಿಸಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ, ಬೆಂಗಳೂರಿನ ಆರ್ಬಿಐನ ಮ್ಯಾನೇಜರ್ ವೆಂಕಟರಾಮಯ್ಯ ಟಿ.ಎನ್. ಅಲ್ಲದೇ ಜಿಲ್ಲಾ ಮಟ್ಟದ ವಿವಿಧ ಬ್ಯಾಂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.