ಅ.10ರಂದು ಉಡುಪಿಯಲ್ಲಿ ಹಿಂದೂ ಸಮಾಜೋತ್ಸವ
ಉಡುಪಿ, ಅ.7: ವಿಶ್ವ ಹಿಂದೂ ಪರಿಷತ್ತಿನ 60ನೇ ವರ್ಷಾಚರಣೆಯ ಪ್ರಯುಕ್ತ ಅದರ ಯುವ ಘಟಕ ಬಜರಂಗ ದಳದ ನೇತೃತ್ವದಲ್ಲಿ ನಡೆದಿರುವ ಶೌರ್ಯ ಜಾಗರಣ ರಥಯಾತ್ರೆಯ ಸಮಾರೋಪ ಹಾಗೂ ಬೃಹತ್ ಹಿಂದೂ ಸಮಾಜೋತ್ಸವ ಅ.10ರ ಮಂಗಳವಾರ ಉಡುಪಿಯಲ್ಲಿ ನಡೆಯಲಿದೆ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತದ ಸಂಯೋಜಕ ಸುನೀಲ್ ಕೆ.ಆರ್.ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ದಕ್ಷಿಣ ಪ್ರಾಂತದ ರಥಯಾತ್ರೆಯು ಸೆ.25ರಂದು ಚಿತ್ರದುರ್ಗದಿಂದ ಹೊರಟಿದ್ದು, ಇಂದು ಪುತ್ತೂರು ಮೂಲಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದೆ. ನಾಳೆ ಮಂಗಳೂರನ್ನು ತಲುಪಲಿದೆ. ಅಲ್ಲಿಂದ ರಥಯಾತ್ರೆಯು ಅ.10ರಂದು ಅಪರಾಹ್ನ 2 ಕ್ಕೆ ಹೆಜಮಾಡಿ ಮೂಲಕ ಉಡುಪಿ ಜಿಲ್ಲೆಯನ್ನು ಪ್ರವೇಶಿಸಲಿದೆ. 3:00ಗಂಟೆಗೆ ಉಡುಪಿಗೆ ಆಗಮಿಸುವ ಶೌರ್ಯ ಜಾಗರಣ ರಥವನ್ನು ಉಡುಪಿಯ ಜೋಡು ಕಟ್ಟೆಯಿಂದ ಶೋಭಾಯಾತ್ರೆ ಯಲ್ಲಿ ಹಿಂದು ಸಮಾಜೋತ್ಸವ ನಡೆಯುವ ಎಂಜಿಎಂ ಕಾಲೇಜು ಮೈದಾನಕ್ಕೆ ಕರೆ ತರಲಾಗುವುದು ಎಂದರು.
ಜೋಡುಕಟ್ಟೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಉದ್ಯಮಿ ಕಡ್ತಲ ವಿಶ್ವನಾಥ್ ಪೂಜಾರಿ ಶೋಭಾ ಯಾತ್ರೆಗೆ ಚಾಲನೆ ನೀಡುವರು. 4ಗಂಟೆಗೆ ಎಂಜಿಎಂ ಕಾಲೇಜು ಮೈದಾನದಲ್ಲಿ ಹಿಂದೂ ಸಮಾಜೋತ್ಸವ ನಡೆಯಲಿದೆ ಎಂದವರು ವಿವರಿಸಿದರು.
ಹಿಂದೂ ಸಮಾಜೋತ್ಸವದಲ್ಲಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಮಧ್ಯಪ್ರದೇಶ ಭೋಪಾಲ್‌ನ ಶ್ರೀಮಹಾಮಂಡಲೇಶ್ವರ ಅಖಿಲೇಶ್ವರಾನಂದ ಗಿರಿ ಮಹಾರಾಜ್ ಅವರು ಆಶೀರ್ವಚನ ನೀಡಲಿದ್ದಾರೆ. ಉದ್ಯಮಿ ಮನೋಹರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಆರೆಸ್ಸೆಸ್ಸ್‌ನ ಪ್ರಾಂತ ಸಹ ಕಾರ್ಯವಾಹ ಪಿ.ಎಸ್.ಪ್ರಕಾಶ್, ಪುಣೆ ಬಂಟ್ಸ್ ಸಂಘದ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಚೂರು, ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್, ಡಾ.ರವೀಂದ್ರ ಶೆಟ್ಟಿ ಬಜಗೋಳಿ, ರಮೇಶ್ ಬಂಗೇರ, ವಿಎಚ್‌ಪಿ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್, ಬಜರಂಗ ದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ಹಾಗೂ ಸುನೀಲ್ ಕೆ.ಆರ್. ಅತಿಥಿಗಳಾಗಿ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಸುಮಾರು 50,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಬರುವ ವಾಹನಗಳ ನಿಲುಗಡೆಗೆ ಬೀಡಿನಗುಡ್ಡೆ ಮೈದಾನ, ಅಜ್ಜರಕಾಡು ಮೈದಾನಗಳಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸುನೀಲ್ ಕೆ.ಆರ್.ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಎಚ್‌ಪಿ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಸಂಚಾಲಕ ಅಶೋಕ್ ಪಾಲಡ್ಕ, ಬಜರಂಗದಳದ ಜಿಲ್ಲಾ ಸಂಯೋಜಕ ಚೇತನ್ ಕುಮಾರ್ ಉಪಸ್ಥಿತರಿದ್ದರು.