ಜ.12: ರಾಜಾಂಗಣದಲ್ಲಿ ಚಿತ್ರ, ಪ್ರಬಂಧ, ವೇಷಭೂಷಣ ಸ್ಪರ್ಧೆ
ಉಡುಪಿ, ಜ.9: ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಜನ್ಮ ತ್ರಿಶತಾಬ್ಧಿ ಆಚರಣೆ ಅಂಗವಾಗಿ ಪರ್ಯಾಯ ಪುತ್ತಿಗೆ ಮಠ, ಪದ್ಮಶಾಲಿ ನೇಕಾರ ಪ್ರತಿಷ್ಠಾನ, ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಜನ್ಮ ತ್ರಿಶತಾಬ್ದಿ ಆಚರಣಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಜ.12ರ ರವಿವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಚಿತ್ರ ರಚನೆ, ಪ್ರಬಂಧ ಹಾಗೂ ವೇಷಭೂಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ ಇಂದ್ರಾಳಿ ಗುರುವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕರೆದಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ದ ವಿವರಗಳನ್ನು ನೀಡಿ, ಜ.12ರಂದು ಬೆಳಗ್ಗೆ 10ಗಂಟೆಗೆ ರಾಜಾಂಗಣದಲ್ಲಿ ಸ್ಪರ್ಧೆಗಳನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ ಎಂದರು.
ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ, ಬಿ. ಸುಪ್ರಸಾದ್ ಶೆಟ್ಟಿ ಉಪಸ್ಥಿತರಿರುವರು. ಜ.14ರಂದು ಸಂಜೆ 7ಗಂಟೆಗೆ ಸಮಾರೋಪ ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ.
ಚಿತ್ರ ರಚನಾ ಸ್ಪರ್ಧೆ: ಕಿರಿಯರ ವಿಭಾಗ(3ನೇ ತರಗತಿಯೊಳಗೆ), ಪ್ರಾಥಮಿಕ ವಿಭಾಗ(4ರಿಂದ 7ನೇ ತರಗತಿ), ಪ್ರೌಢ ವಿಭಾಗ(8ರಿಂದ 10ನೇ ತರಗತಿ)ವಿದ್ಯಾರ್ಥಿಗಳಿಗೆ ಅಹಲ್ಯಾಬಾಯಿ ಹೋಳ್ಕರ್ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದೆ. ಎರಡು ಗಂಟೆ ಅವಧಿ ನೀಡಲಾಗುವುದು. ವಿಜೇತರಿಗೆ 3,000ರೂ., 2,000ರೂ., 1,000ರೂ. ನಗದು ಬಹುಮಾನವಿದೆ.
ಪ್ರಬಂಧ ಸ್ಪರ್ಧೆ: ಪ್ರೌಢಶಾಲಾ ವಿಭಾಗ(8ರಿಂದ 10ನೇ ತರಗತಿ), ಪ. ಪೂ. ವಿಭಾಗ (ಪ್ರಥಮ, ದ್ವಿತೀಯ ಪಿಯುಸಿ), ಪದವಿ ಹಾಗೂ ಸಾರ್ವಜನಿಕ ವಿಭಾಗದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಪ್ರಬಂಧ ಬರೆಯಲು ಬಿಳಿ ಹಾಳೆ ಸ್ಥಳದಲ್ಲೇ ನೀಡಲಾಗುವುದು. ವಿಜೇತರಿಗೆ 3,000ರೂ., 2,000ರೂ., 1,000ರೂ. ಬಹುಮಾನವಿದೆ.
ವೇಷಭೂಷಣ ಸ್ಪರ್ಧೆ: ಅಪರಾಹ್ನ 1:00 ಗಂಟೆಯಿಂದ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಸಂಸ್ಮರಣೆಗಾಗಿ ನಾನು ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಪರಿಕಲ್ಪನೆಯಡಿ ವೇಷಭೂಷಣ ಸ್ಪರ್ಧೆಯು 16ರಿಂದ 30ವಯಸ್ಸಿನವರು, 31ರಿಂದ 50 ಹಾಗೂ 51ವಯಸ್ಸಿಗಿಂತ ಮೇಲ್ಪಟ್ಟವರ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.
ಎರಡು ನಿಮಿಷಗಳ ಕಾಲಾವಕಾಶವಿದ್ದು ವಿಜೇತರಿಗೆ 7,000ರೂ., 5,000ರೂ., 3,000ರೂ. ನಗದು ಬಹುಮಾನವಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಪುತ್ತಿಗೆ ಶಾಖಾ ಮಠಗಳ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ, ಮಂಜುನಾಥ ಮಣಿಪಾಲ, ರಮೇಶ್ ಭಟ್, ಜಿಲ್ಲಾ ಸಂಚಾಲಕಿ ಲಕ್ಷ್ಮೀ ಹೆಬ್ಬಾರ್, ಅವಿನಾಶ್ ಶೆಟ್ಟಿಗಾರ್ ಮಾರ್ಪಳ್ಳಿ ಉಪಸ್ಥಿತರಿದ್ದರು.