ಸೆ.30ರವರೆಗೆ ಸಬ್ರಿಜಿಸ್ಟಾರ್ ಕಚೇರಿಯಲ್ಲಿ 12 ಗಂಟೆ ಕೆಲಸ
ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಕಾರ್ಯ
ಉಡುಪಿ, ಸೆ.23: ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯದ ಎಲ್ಲಾ ಸಬ್ ರಿಜಿಸ್ಟ್ರಾರ್ ಅವರ ಕಚೇರಿ (ಉಪನೋಂದಣಾಧಿಕಾರಿಗಳ ಕಚೇರಿ) ಕೆಲಸದ ಅವಧಿಯನ್ನು ಬೆಳಗ್ಗೆ 8:00ರಿಂದ ರಾತ್ರಿ 8:00 ಗಂಟೆವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಸೆ.23ರಿಂದ 30ರವರೆಗೆ ಈ ಆದೇಶ ಜಾರಿಗೆಯಲ್ಲಿರಲಿದೆ. ಒಂದು ವಾರ ಸಾರ್ವಜನಿಕರು 12 ಗಂಟೆಗಳ ಕಾಲ ಸೇವೆ ಪಡೆಯಬಹುದಾಗಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಮೌಲ್ಯ ಮಾಪನ ಸಮಿತಿಯ 2023-24ನೇ ಸಾಲಿನಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ.
ಈ ಹಿನ್ನೆಲೆಯಲಿ ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲಾ ಉಪನೋಂದಣಿ ಕಚೇರಿಗಳ ಕೆಲಸದ ಅವಧಿಯನ್ನು ಸೆ.23ರಿಂದ ಜಾರಿಗೆ ಬರುವಂತೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕಾರ್ಯ ನಿರ್ವಹಿಸಲು ಕಚೇರಿ ಅವಧಿಯನ್ನು ವಿಸ್ತರಿಸಿ ಆದೇಶಿಸಲಾಗಿದೆ. ತಿಂಗಳ ನಾಲ್ಕನೇ ಶನಿವಾರವಾದ ಇಂದು ಸಹ ಕಚೇರಿ ಕಾರ್ಯನಿರ್ವಹಿಸಿದೆ.
ಈ ಕೆಲಸದ ಅವಧಿಯು ಸೆ.30ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದು ಕೊಳ್ಳಬಹುದು ಎಂದು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ಬಿ.ಆರ್.ಮಮತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.