ಎ.18ರಂದು ಕನ್ನಡ ಚಿತ್ರ ‘ಕೋರ’ ಬಿಡುಗಡೆ
ಉಡುಪಿ, ಎ.1: ರತ್ನಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಪಿ ಮೂರ್ತಿ ನಿರ್ಮಿಸಿ, ಒರಟ ಶ್ರೀ ನಿರ್ದೇಶಿಸಿದ ‘ಕೋರ’ ಚಿತ್ರ ಇದೇ ಎ.18ರಂದು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ ಪಿ.ಮೂರ್ತಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಿನಿಮಾದ ಮಾಹಿತಿಗಳನ್ನು ಹಂಚಿಕೊಂಡ ಅವರು, ರಿಯಾಲಿಟಿ ಶೋ ಖ್ಯಾತಿ ಪಡೆದಿರುವ ಸುನಾಮಿ ಕಿಟ್ಟಿ ಈ ಚಿತ್ರದ ನಾಯಕ ನಟರಾಗಿ ನಟಿಸಿದ್ದಾರೆ ಎಂದರು.
ಕೊರಗಜ್ಜನ ಆಶೀರ್ವಾದದಿಂದ ಆರಂಭವಾದ ಚಿತ್ರ ಕೋರ. ಇದು ನಮ್ಮ ನೆಲದ ಕಥೆ. ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ರಾಕ್ಷಸನೊಬ್ಬನ ಕುರಿತಾದ ಕಥೆಯೂ ಕೂಡಾ ಆಗಿದೆ. ಹೆಚ್ಚಿನ ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆದಿದೆ. ಸಕಲೇಶಪುರ, ಶೃಂಗೇರಿ, ಉಡುಪಿ, ಮಂಗಳೂರು ಮೊದಲಾದ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ ಎಂದರು.
ಚಿತ್ರದಲ್ಲಿ ತಾನೂ ಕೂಡಾ ಕಠೋರ ಎಂಬ ಪಾತ್ರ ನಿರ್ವಹಿಸಿದ್ದಾಗಿ ತಿಳಿಸಿದ ಮೂರ್ತಿ ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಕನ್ನಡಿಗರು ಚಿತ್ರವನ್ನು ನೋಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ನಿರ್ದೇಶಕ ಒರಟಶ್ರೀ ಮಾತನಾಡಿ, ಕೋರ 90 ವರ್ಷಗಳ ಹಿಂದೆ ಪ್ರಕೃತಿಯನ್ನು ದೇವರೆಂದು ಪೂಜಿಸು ತ್ತಿದ್ದ ಕಥೆ. ಈಗ, ಒಂದು ಸಣ್ಣ ಭೂಮಿಗೆ ಸಹ ಸಂಘರ್ಷ ನಡೆಯುತ್ತದೆ. ಇದು ವಿಶಿಷ್ಟ ವಿಷಯವನ್ನು ಹೊಂದಿ ರುವ ಕಮರ್ಷಿಯಲ್ ಚಿತ್ರ. ಇದು ಕನ್ನಡ ಚಿತ್ರವಾಗಿದ್ದರೂ, ಇದು ಎಲ್ಲಾ ಭಾಷೆಗಳೊಂದಿಗೆ ಸಂಪರ್ಕ ಸಾಧಿಸಬಹುದಾದ ಕಥೆ ಎಂದರು.
ಚಿತ್ರದ ತಾರಾಗಣದಲ್ಲಿ ಎಂ.ಕೆ.ಮಠ, ಮುನಿ, ನೀನಾಸಂ ಅಶ್ವಥ್, ಯತಿರಾಜ್, ಸೌಜನ್ಯ ನಟಿಸಿದ್ದಾರೆ, ಹೇಮಂತ್ ಕುಮಾರ್ ಸಂಗೀತವಿದ್ದು, ಸೆಲ್ವಂ ಛಾಯಾಗ್ರಾಹಣವಿದೆ ಎಂದರು.