ಫೆ.2, 3ರಂದು ಬಸ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಸಂಭ್ರಮ
ಬೈಲೂರು, ಜ.30: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ಅಮೃತ ಮಹೋತ್ಸವ ಸಂಭ್ರಮಾಚರಣೆಯು ಫೆ.2 ಮತ್ತು 3ರಂದು ನಡೆಯಲಿದೆ ಎಂದು ಅಮೃತಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸದಾನಂದ ಸಾಲ್ಯಾನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
1947ರ ಸ್ವಾತಂತ್ರ್ಯಪೂರ್ವದಲ್ಲಿ ಆರಂಭವಾದ ಶಾಲೆಯಲ್ಲಿ ಸುವರ್ಣ ಮಹೋತ್ಸವ, ವಜ್ರಮಹೋತ್ಸವ ಆಚರಿಸಲಾಗಿದ್ದು ಇದೀಗ ಅಮೃತಮಹೋತ್ಸವವನ್ನು ಆಚರಿಸಲಗುತ್ತಿದೆ ಎಂದರು.
ವಿಭಿನ್ನ ರೀತಿಯಲ್ಲಿ ಅಮೃತ ಮಹೋತ್ಸವವನ್ನು ಆಚರಿಸುವ ಉದ್ದೇಶದಿಂದ ಫೆ. 2ರಂದು ಬೆಳಗ್ಗೆ 8.30ಕ್ಕೆ ಅಮೃತ ಮಹೋತ್ಸವ ಪುರಮೆರವಣಿಗೆ ಜಾರ್ಕಳದಿಂದ ಶಾಲೆಯವರೆಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಭಜನಾ ತಂಡಗಳು, ವಿವಿಧ ಬಗೆಯ ಟ್ಯಾಬ್ಲೋಗಳು ಭಾಗವಹಿಸಲಿವೆ. ಕಾರ್ಕಳ ವಿಶಾಲ್ ಮೋಟರ್ಸ್ ಮಾಲಕರಾದ ಜೀವನ್ದಾಸ್ ಅಡ್ಯಂತಾಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೈಲೂರು ಬೀದಿ ಇಲ್ಲಿಯ ಜೀರ್ಣೊದ್ಧಾರ ಸಮಿತಿಯ ಗೌರವಾಧ್ಯಕ್ಷ ಕರುಣಾಕರ ಹೆಗ್ಡೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಪ್ರತಿಭಾಪುರಸ್ಕಾರ ಸಭಾ ಕಾರ್ಯಕ್ರಮ ನಡೆಯಲಿದ್ದು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ ನಡೆಯಲಿದೆ ಎಂದರು.
ರಾತ್ರಿ 7 ಗಂಟೆಗೆ ಅಮೃತ ಮಹೋತ್ಸವ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಅಮೃತ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದಾರೆ. ಶಾಸಕ ವಿ. ಸುನಿಲ್ ಕುಮಾರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅಮೃತ ಸೌಧದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ನೆರವೇರಿಸಲಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಗೆ ಹಾಕಲಾದ ಇಂಟರ್ಲಾಕ್ ಉದ್ಘಾಟನೆ, ಆಟದ ಮೈದಾನ ಉದ್ಘಾಟನೆ ದಾನಿಗಳಿಂದ ನಡೆಯಲಿದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಶಾಸಕ ಎಸ್.ಎಲ್.ಭೋಜೆ ಗೌಡ, ಡಾ.ತೇಜಸ್ವಿನಿ ಗೌಡ, ಮಂಜುನಾಥ ಭಂಡಾರಿ, ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ, ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಮ್. ಟಿ. ರೇಜು, ಜಿಲ್ಲಾಧಿಕಾರಿ, ಡಾ. ಕೆ. ವಿದ್ಯಾಕುಮಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಪೊಲೀಸ್ ಅಧೀಕ್ಷಕ ಡಾ. ಅರುಣ ಕೆ., ಉಪನಿರ್ದೇಶಕ ಗಣಪತಿ ಕೆ., ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ ಬಿ.ಎ., ವಿಶೇಷ ಅಹ್ವಾನಿತರಾಗಿ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ, ಅಕ್ಷಯ ಗೋಖಲೆ, ಕಾರ್ಕಳ ಮತ್ತಿತರರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಪ್ರಸಕ್ತ ಸೇವೆ ಸಲ್ಲಿಸುತ್ತಿರುವ ಹಾಗೂ ಸೇವೆ ಸಲ್ಲಿಸಿದ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ, ಪ್ರಮುಖ ದಾನಿಗಳಿಗೆ, ನಿಕಟಪೂರ್ವ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳಿಗೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರುಗಳಿಗೆ, ಸಾಧಕ ವಿದ್ಯಾರ್ಥಿ ಹಾಗೂ ಹಳೆವಿದ್ಯಾರ್ಥಿಗಳಿಗೆ ಗೌರವಾರ್ಪಣಾ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6ರಿಂದ ಅಂಗನವಾಡಿ ಪುಟಾಣಿಗಳಿಂದ ನೃತ್ಯ ಕಲರವ ಹಾಗೂ ಶಾಲಾ ಮಕ್ಕಳಿಂದ ನೃತ್ಯ ವೈಭವ, ರಾತ್ರಿ ಗಂಟೆ 10ರಿಂದ ಶಾಲಾ ಮಕ್ಕಳಿಂದ ಪೌರಾಣಿಕ ಯಕ್ಷಗಾನ ಮೀನಾಕ್ಷಿ ಕಲ್ಯಾಣ ಪ್ರದರ್ಶನಗೊಳ್ಳಲಿದೆ.
ಫೆ.3ರಂದು ಹಳೆವಿದ್ಯಾರ್ಥಿಗಳ ಅಮೃತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ತುಳು ನಾಟಕ ಮತ್ತು ಚಲನಚಿತ್ರ ನಟ ಅರವಿಂದ ಬೋಳಾರ್ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಾರ್ಕಳ ರಾಜಸೂಯ ಯಾಗಶಾಲೆಯ ವೇ.ಮೂ.ಪ್ರಸಾದ್ ತಂತ್ರಿ ಹಾಗೂ ಅಮೃತ ಮಹೋತ್ಸವಕ್ಕೆ ದೇಣಿಗೆಯಿತ್ತ ದಾನಿಗಳ ಉಪಸ್ಥಿತಿಯಲ್ಲಿ ಹಳೆ ವಿದ್ಯಾರ್ಥಿಗಳ ಅಮೃತ ಸಂಭ್ರಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6.30ರಿಂದ ಪ್ರಸನ್ನ ಶೆಟ್ಟಿ ಬೈಲೂರು ಇವರ ಸಂಯೋಜನೆಯಲ್ಲಿ ಹಳೆವಿದ್ಯಾರ್ಥಿಗಳಿಂದ ಕಾಮಿಡಿ ಸಂಜೆ ಮತ್ತು ಹಳೆ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 10 ಗಂಟೆಗೆ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಇವರಿಂದ ಮಲ್ಲ ಸಂಗತಿಯೇ ಅತ್ತ್ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಮೃತಮಹೋತ್ಸವದ ಅಧ್ಯಕ್ಷರಾದ ಮೋಹನದಾಸ್ ಹೆಗ್ಡೆ, ಪ್ರದಾನ ಕಾರ್ಯದರ್ಶಿ ಬಿ. ಹರೀಶ್ ಆಚಾರ್ಯ, ಕೋಶಾಧಿಕಾರಿ ಹಾಗೂ ಶಾಲಾ ಮುಖ್ಯ ಶಿಕ್ಷಕಿ ವಸಂತಿ ಎಚ್. ಜಿ., ಕಾರ್ಯದರ್ಶಿ ಮುಸ್ತಾಫ್, ದೈಹಿಕ ಶಿಕ್ಷಣ ಶಿಕ್ಷಕ ಉದಯ ಕುಮಾರ್, ಹಳೆವಿದ್ಯಾರ್ಥಿ ಸಂಘದ ಅದ್ಯಕ್ಷ ಆನಂದ ಪೂಜಾರಿ, ಕಾರ್ಯದರ್ಶಿ ನಿತಿನ್ ಶೆಟ್ಟಿ ಉಪಸ್ಥಿರಿದ್ದರು.