2025ನೇ ಸಾಲಿನ ಉಡುಪ-ಹಂದೆ ಪ್ರಶಸ್ತಿಗೆ ಹೆರೆಂಜಾಲು ಗೋಪಾಲ ಗಾಣಿಗ, ಶ್ರೀಪಾದ ಭಟ್ ಆಯ್ಕೆ
ಹೆರಂಜಾಲು - ಶ್ರೀಪಾದ ಭಟ್
ಬ್ರಹ್ಮಾವರ, ಜ.4: ಐವತ್ತರ ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವ ಯಕ್ಷಗಾನದಲ್ಲಿ ವಿಶ್ವ ಖ್ಯಾತಿ ಪಡೆದಿರುವ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರೂ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರೂ ಆಗಿರುವ ದಿ.ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಎಚ್. ಶ್ರೀಧರ ಹಂದೆ ಹೆಸರಿನ 2025ರ ಸಾಲಿನ ‘ಉಡುಪ-ಹಂದೆ ಪ್ರಶಸ್ತಿ’ಗೆ ಯಕ್ಷಗಾನದ ಪ್ರಸಿದ್ಧ ಭಾಗವತರಾದ ಹೆರೆಂಜಾಲು ಗೋಪಾಲ ಗಾಣಿಗ ಮತ್ತು ರಾಷ್ಟ್ರೀಯ ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್ ಭಾಜನರಾಗಿದ್ದಾರೆ.
ಕುಂದಾಪುರ ತಾಲೂಕಿನ ನಾಗೂರಿನ ಯಕ್ಷಗಾನ ಭಾಗವತ ಹೆರಂಜಾಲು ಗೋಪಾಲ ಗಾಣಿಗರು, ತಂದೆ ವೆಂಕಟರಮಣ ಗಾಣಿಗರಿಂದ ಬಳುವಳಿಯಾಗಿ ಬಂದ ಯಕ್ಷ ಸಂಪತ್ತನ್ನು ವಿಸ್ತರಿಸಿಕೊಳ್ಳುವಲ್ಲಿ ಡಾ.ಶಿವರಾಮ ಕಾರಂತರ ನಿರ್ದೇಶನದ ಉಡುಪಿಯ ಯಕ್ಷಗಾನ ಕೇಂದ್ರವನ್ನು ಸೇರಿ, ಗುರು ನೀಲಾವರ ರಾಮಕೃಷ್ಣಯ್ಯ, ಮಹಾಬಲ ಕಾರಂತರ ಗರಡಿಯಲ್ಲಿ ಪಳಗಿ ಹಿಮ್ಮೇಳ ಮತ್ತು ಮುಮ್ಮೇಳಗಳಲ್ಲಿ ಸಾಧನೆ ಮಾಡಿದವರು.
ಡಾ.ಶಿವರಾಮ ಕಾರಂತರ ಯಕ್ಷ ಬ್ಯಾಲೆ ತಂಡದ ಮೂಲಕ ರಷ್ಯ, ಲಂಡನ್, ಪ್ರಾನ್ಸ್, ಕುವೈತ್ ಮೊದಲಾದೆಡೆ ಯಕ್ಷ ಕಂಪನ್ನು ಪಸರಿಸಿದವರು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗ ನಿರ್ದೇಶಕ ಬಿ.ವಿ. ಕಾರಂತ ರ ಶಾಕುಂತಲ ನೃತ್ಯನಾಟಕಕ್ಕೆ ಯಕ್ಷ ನೃತ್ಯವನ್ನು ನಿರ್ದೇಶಿಸಿದವರು. ಅಮೃತೇಶ್ವರಿ, ಮಾರಣಕಟ್ಟೆ, ಕಮಲಶಿಲೆ, ಮಂದರ್ತಿ, ಸಾಲಿಗ್ರಾಮ, ಶಿರಸಿ, ಸೌಕೂರು ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಪೌರಾಣಿಕ ಮತ್ತು ಆಧುನಿಕ ಪ್ರಸಂಗಗಳಲ್ಲಿ ಸೈ ಎನಿಸಿಕೊಂಡವರು.
ಶ್ರೀಪಾದ ಭಟ್: ಮೂಲತಃ ಉತ್ತರ ಕನ್ನಡ ಧಾರೇಶ್ವರದ ಡಾ. ಶ್ರೀಪಾದ ಭಟ್ ಅವರು ಪ್ರೌಢ ಶಾಲಾ ಅಧ್ಯಾಪನ ದೊಂದಿಗೆ ಸುಮಾರು ನಲ್ವತ್ತು ವರ್ಷಗಳ ಕಾಲ ರಂಗಭೂಮಿಯಲ್ಲಿ ಕೃಷಿ ಮಾಡಿದವರು. ಜನಪದ ರಂಗ ಭೂಮಿ, ಯಕ್ಷಗಾನ ಹಾಗೂ ಆಧುನಿಕ ರಂಗಭೂಮಿ ಕುರಿತ ಸಂಶೋಧನೆ ಗಾಗಿ ಪಿಎಚ್ಡಿ ಪದವಿ ಪಡೆದವರು.
ಮಕ್ಕಳ ನಾಟಕ, ಬೀದಿ ನಾಟಕ, ಪ್ರೊಸೀನಿಯಂ ನಾಟಕ, ಕಾವ್ಯ ನಾಟಕ ಮೊದಲಾದ ಪ್ರಕಾರಗಳಲ್ಲಿ ನಾಟಕಗಳನ್ನು ನಿರ್ದೇಶಿಸಿದ ಇವರ ನಿರ್ದೇಶನದ ನೂರಾರು ನಾಟಕಗಳು ದೇಶದಾದ್ಯಂತ ಪ್ರಯೋಗಗೊಂಡಿವೆ.ನಾಟಕ ಅಕಾಡೆಮಿಯ ಸದಸ್ಯರಾಗಿ, ಹಂಪಿ ವಿವಿಯ ಅಧ್ಯಯನ ಮಂಡಳಿಯ ಸದಸ್ಯರಾಗಿ, ರಂಗ ಸಮಾಜದ ಸದಸ್ಯರಾಗಿ, ಉತ್ತರ ಕನ್ನಡದ ಚಿಂತನ ರಂಗ ಅಧ್ಯಯನ ಕೇಂದ್ರ, ಹಾವೇರಿಯ ಶೇಷಗಿರಿ ಕಲಾತಂಡ, ಸಮುದಾಯ ಕರ್ನಾಟಕ, ನಿರ್ದಿಗಂತ ಮೊದ ಲಾದ ಸಂಸ್ಥೆಗಳಲ್ಲಿ ರಂಗ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವವುಳ್ಳ ಇವರಿಗೆ ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಕೋಟದ ಪಟೇಲರ ಮನೆಯಲ್ಲಿ ಜನವರಿ 31 ಮತ್ತು ಫೆಬ್ರುವರಿ 1 ರಂದು ನಡೆಯುವ ಎರಡು ದಿನಗಳ ಕಲೋತ್ಸವದ ಸಂದರ್ಭದಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.