ಕಳೆದೊಂದು ವರ್ಷದಲ್ಲಿ ಮಹಿಳಾ ದೌರ್ಜನ್ಯದ 233 ಪ್ರಕರಣ ದಾಖಲು: ಡಿಸಿ ಡಾ. ವಿದ್ಯಾಕುಮಾರಿ
ಉಡುಪಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ
ಉಡುಪಿ, ಸೆ.29: ಜಿಲ್ಲೆಯಲ್ಲಿ 2022ರ ಅಕ್ಟೋಬರ್‌ನಿಂದ ಈವರೆಗೆ ಮಹಿಳೆಯರ ಮೇಲಿನ ದೌರ್ಜನ್ಯದ ಒಟ್ಟು 233 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 181 ಪ್ರಕರಣಗಳು ಇತ್ಯರ್ಥಗೊಂಡಿವೆ. ಬಾಕಿ ಉಳಿದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ವಿವಿಧ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.ನೊಂದ ಮಹಿಳೆಯರಿಗೆ ನೆರವು ನೀಡಲು ಜಿಲ್ಲೆಯಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಇದ್ದು, ಸಂಕಷ್ಟದಲಿರುವ ಮಹಿಳೆಯರು ಇದರ ಸದುಪಯೋಗ ಪಡೆದು ಕೊಳ್ಳಬಹುದು ಎಂದವರು ಹೇಳಿದರು.
ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಸರಕಾರ ಅನೇಕ ಕಾನೂನು ಹಾಗೂ ಅವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಸಮರ್ಪಕವಾಗಿ ಹಾಗೂ ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆಯನ್ನು ಅರ್ಧದಲ್ಲೆ ಬಿಟ್ಟ ಮಕ್ಕಳು ಹಾಗೂ ಬಾಲ ಕಾರ್ಮಿಕರು ಬಾಲ್ಯ ವಿವಾಹಕ್ಕೆ ಒಳಪಡುವ ಸಾಧ್ಯತೆ ಇದ್ದು, ಅವರುಗಳಿಗೆ ಆಪ್ತ ಸಮಾಲೋಚನೆ ನಡೆಸಿ ಶಿಕ್ಷಣದ ಮಹತ್ವ ಕುರಿತು ಅರಿವು ಮೂಡಿಸಿ ಅವರನ್ನು ಮರಳಿ ಶಾಲೆಗೆ ಕರೆತರಲು ಮನವೊಲಿಸಬೇಕು ಎಂದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಡಿಮೆ ಇವೆ ಎಂದು ನಿರ್ಲಕ್ಷ್ಯ ತೋರದೇ, ಗ್ರಾಮ ಪಂಚಾಯತಿಗಳು ಆಗಾಗ ಸಭೆ ನಡೆಸಿ, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಹಾಗೂ ಬಾಲ್ಯ ವಿವಾಹ ತಡೆಗಟ್ಟುವ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಿ ಬಾಲ್ಯ ವಿವಾಹ ತಡೆಗಟ್ಟಲು ಪ್ರಯತ್ನಿಸಬೇಕು ಎಂದರು.
ದೇವಸ್ಥಾನಗಳಲ್ಲಿ ಮದುವೆಗಳನ್ನುಏರ್ಪಡಿಸುವ ಸಂದರ್ಭದಲ್ಲಿ ಅನುಮಾನ ಬಂದಲ್ಲಿ ಅರ್ಚಕರುಗಳು ಜನನ ಪ್ರಮಾಣ ಪತ್ರವನ್ನು ಪರಿಶೀಲಿಸಿ ಮದುವೆ ನಡೆಸಬೇಕು. ಇಲ್ಲವಾದಲ್ಲಿ ಬಾಲ್ಯ ವಿವಾಹ ನಡೆಸಿದ ದೇವಸ್ಥಾನದ ಅರ್ಚಕರನ್ನು ಶಿಕ್ಷೆಗೆ ಒಳಪಡಿಸಲಾಗುವುದು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಈ ಕುರಿತು ನಿಗಾ ವಹಿಸಬೇಕು. ಇಲ್ಲವಾದಲ್ಲಿ ಅವರುಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಕೌಟುಂಬಿಕ ಹಿಂಸೆಯ 73 ಪ್ರಕರಣ: ಕೌಟುಂಬಿಕ ಹಿಂಸೆಗೆ ಸಂಬಂಧಿ ಸಿದಂತೆ ಜಿಲ್ಲೆಯಲ್ಲಿ 2022ರ ಅಕ್ಟೋಬರ್‌ನಿಂದ ಈವರೆಗೆ 73 ಪ್ರಕರಣಗಳು ದಾಖಲಾಗಿದ್ದು, 49 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 24 ಪ್ರಕರಣ ಗಳು ಬಾಕಿ ಇವೆ. ಉಡುಪಿ ತಾಲೂಕಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಈ ಕುರಿತು ಗಮನಹರಿಸುವಂತೆ ಹಾಗೂ ಕಾಯ್ದೆಯ ಕುರಿತು ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಗಾರ ಏರ್ಪಡಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಮಾತೃ ವಂದನಾ ಯೋಜನೆಯ ಮಾಹಿತಿ ಕೊರತೆಯಿಂದಾಗಿ ಗರ್ಭಿಣಿ ಮಹಿಳೆಯರು ಇದರ ಲಾಭದಿಂದ ವಂಚಿತರಾಗುತ್ತಿ ದ್ದಾರೆ. ಅಂಗನವಾಡಿ ಗಳಲ್ಲಿ ಇದರ ಬಗ್ಗೆ ಮಾಹಿತಿ ನೀಡಿ ಅವರುಗಳನ್ನು ಈ ಯೋಜನೆಯ ಫಲಾನುಭವಿಗಳನ್ನಾಗಿ ಸಬೇಕು ಎಂದರು.
ಬೋಟು ಮಾಲಕರಿಗೆ ಎಚ್ಚರಿಕೆ: ಮೀನುಗಾರಿಕಾ ಬಂದರುಗಳಲ್ಲಿ ಕಡಿಮೆ ಸಂಬಳಕ್ಕಾಗಿ ಮೀನು ಆಯುವ ವೃತ್ತಿಗೆ ಮಕ್ಕಳನ್ನು ನಿಯೋಜಿಸುತ್ತಿದ್ದು, ಅದರಲ್ಲೂ ಹೆಚ್ಚಾಗಿ ಹೆಣ್ಣು ಮಕ್ಕಳು ಇಲ್ಲಿ ಕಂಡುಬರುತಿದ್ದಾರೆ. ಈ ಬಗ್ಗೆ ಬೋಟುಗಳ ಮಾಲಕರಿಗೆ ಮೊದಲು ಮಾಹಿತಿ ನೀಡಿ, ಮಕ್ಕಳನ್ನು ನಿಯೋಜಿಸದಂತೆ ಎಚ್ಚರಿಕೆ ನೀಡಬೇಕು. ಅಧಿಕಾರಿಗಳು ಆಗಿಂದಾಗ್ಗೆ ದಿಢೀರ್ ಕಾರ್ಯಾಚರಣೆ ನಡೆಸಿ, ಮಕ್ಕಳನ್ನು ರಕ್ಷಿಸಿ ಅವರುಗಳಿಗೆ ಪುನರ್ವಸತಿ ಕಲ್ಪಿಸಬೇಕು. ಭಿಕ್ಷಾಟನೆಯಲ್ಲಿ ನಿರತ ರಾಗಿರುವ ಮಕ್ಕಳ ರಕ್ಷಣೆಗೆ ಮೊದಲು ಒತ್ತು ನೀಡಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಮಾತನಾಡಿ, ಕಟಪಾಡಿಯಲ್ಲಿರುವ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ ನಿರ್ಮಾಣ ಕಾಮಗಾರಿಯು ಅಪೂರ್ಣಗೊಂಡಿದ್ದು, ಉಸ್ತುವಾರಿ ಸಚಿವರ ಸೂಚನೆಯಂತೆ ಆದ್ಯತೆಯ ಮೇಲೆ ಕೈಗೊಂಡು ಆದಷ್ಟು ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಡಿವೈಎಸ್‌ಪಿ ದಿನಕರ್ ಪಿ.ಕೆ, ವಿವಿಧ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ವಯಂ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.
ಪೋಕ್ಸೋ ಕಾಯ್ದೆಯಡಿ 38 ಪ್ರಕರಣ
ಪೋಕ್ಸೋ ಕಾಯ್ದೆಯಡಿ ಪ್ರಸಕ್ತ ಸಾಲಿನಲ್ಲಿ ಒಟ್ಟು 38 ಪ್ರಕರಣಗಳು ದಾಖಲಾಗಿದ್ದು, 23 ಪ್ರಕರಣಗಳು ನ್ಯಾಯಾಲಯ ದಲ್ಲಿವೆ. 10 ಪ್ರಕರಣಗಳು ತನಿಖೆಯ ಹಂತದಲ್ಲಿ ಇವೆ ಎಂದು ಡಾ.ವಿದ್ಯಾಕುಮಾರಿ ತಿಳಿಸಿದರು.
ಶಾಲೆಗಳಲ್ಲಿ ಪೋಕ್ಸೋ ಕಾಯಿದೆ ಹಾಗೂ ಬಾಲ್ಯ ವಿವಾಹ ನಿಷೇಧ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಗಳನ್ನು ಏರ್ಪಡಿಸಬೇಕು ಎಂದವರು ಸಲಹೆ ನೀಡಿದರು.