ಎ.25-27: ಉಡುಪಿಯಲ್ಲಿ ವೈಶ್ಯವಾಣಿ ಒಲಂಪಿಕ್ಸ್ 2025

ಉಡುಪಿ, ಎ.18: ವೈಶ್ಯವಾಣಿ ಸಮಾಜ ಬಾಂಧವರಿಗಾಗಿ ಇದೇ ಮೊದಲ ಬಾರಿಗೆ ಪುತ್ತೂರಿನ ಎಲ್‌ವಿಟಿ ಪ್ರೆಂಡ್ಸ್ ವತಿಯಿಂದ ‘ವೈಶ್ಯವಾಣಿ ಒಲಂಪಿಕ್ಸ್ -2025’ ಅಂತರ್ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಲ್‌ವಿಟಿ ಫ್ರೆಂಡ್ಸ್‌ನ ಅಧ್ಯಕ್ಷ ಲಕ್ಷ್ಮೀಕಾಂತ್ ಶೇಟ್ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎ.25, 26 ಹಾಗೂ 27ರಂದು ಈ ಕ್ರೀಡಾಕೂಟ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣ ಹಾಗೂ ಉಡುಪಿ ಎಂಜಿಎಂ ಕಾಲೇಜಿನ ಕ್ರೀಡಾಂಗಣ ದಲ್ಲಿ ನಡೆಯಲಿದೆ ಎಂದರು.
ಎ.25ರಂದು ಬೆಳಗ್ಗೆ 9:30ಕ್ಕೆ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದ್ದು, ಶಾಸಕರಾದ ಯಶಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ಎಲ್‌ವಿಟಿ ದೇವಸ್ಥಾನದ ಅರ್ಚಕ ಅನಂತ ಭಟ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಎ.25ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಅಥ್ಲೆಟಿಕ್ ಸ್ಪರ್ಧೆ, ಶಟ್ಲ್ ಬ್ಯಾಡ್ಮಿಂಟನ್ ಹಾಗೂ ಈಜು ಸ್ಪರ್ಧೆಗಳು ನಡೆಯಲಿವೆ. ಎ.26ರಂದು ಎಂಜಿಎಂ ಕಾಲೇಜು ಕ್ರೀಡಾಂಗಣದಲ್ಲಿ ವಾಲಿಬಾಲ್, ತ್ರೋಬಾಲ್, ಹಗ್ಗ-ಜಗ್ಗಾಟ, ಗುಡ್ಡಗಾಡು ಓಟದ ಸ್ಪರ್ಧೆಗಳು ನಡೆಯಲಿವೆ ಎಂದು ಲಕ್ಷ್ಮೀಕಾಂತ್ ಶೇಟ್ ತಿಳಿಸಿದರು.
ಕ್ರಿಕೆಟ್ ಪಂದ್ಯಾಟ ಎಂಜಿಎಂ ಕಾಲೇಜು ಮೈದಾನದಲ್ಲಿ ಎ.25ರಿಂದ 27ರವರೆಗೆ ನಡೆಯಲಿವೆ. ಎ.27ರ ಸಂಜೆ ಎಂಜಿಎಂ ಕಾಲೇಜು ಮೈದಾನದಲ್ಲಿ ಸಮಾರೋಪ ಸಮಾರಂಭವೂ ನಡೆಯಲಿದ್ದು, ಇಲ್ಲೇ ಸಾಂಸ್ಕೃತಕ ಕಾರ್ಯಕ್ರಮಗಳೂ ನಡೆಯಲಿವೆ ಎಂದರು.
ವೈಶ್ಯವಾಣಿ ಸಮಾಜದ ಯುವಕ-ಯುವತಿಯರು, ಬಾಲಕ- ಬಾಲಕಿಯರು ಹಾಗೂ ಆಸಕ್ತರು ಈ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ಕ್ರಿಕೆಟ್ ವಿಜೇತರಿಗೆ 5000ರೂ. ಸೇರಿದಂತೆ ಪ್ರತಿಯೊಂದು ಸ್ಪರ್ಧೆಯ ವಿಜೇತರಿಗೂ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು ಎಂದೂ ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಭರತ್ ಶೇಟ್, ಸಚಿನ್ ನಾಯ್ಕ್, ಗೌರವಾಧ್ಯಕ್ಷ ವಾಸುದೇವ್, ಸಾಂಸ್ಕೃತಿಕ ಕಾರ್ಯದರ್ಶಿ ಧನುಷ್ ಗಾಂಸ್, ಕೋಶಾಧಿಕಾರಿ ಸಚಿನ್ ಶೇಟ್, ಅಜಯ್, ಪ್ರದೀಪ್ ಉಪಸ್ಥಿತರಿದ್ದರು.