ಎ.26: ಪೇಜಾವರಶ್ರೀಗಳಿಂದ ಶ್ರೀಕೃಷ್ಣ 108 ಕೃತಿ ಬಿಡುಗಡೆ

ಉಡುಪಿ, ಎ.25: ಶ್ರೀಕೃಷ್ಣನ ಬಾಲಲೀಲೆಗಳಿಂದ ತೊಡಗಿ ನಿರ್ಯಾಣ ದವರೆಗಿನ 108 ವಿವಿಧ ಘಟನಾವಳಿಗಳನ್ನು ನಿರೂಪಿಸುವ ಮೂಲಕ ರಚನೆಗೊಂಡಿರುವ ಲೇಖಕ, ಸಾಹಿತಿ ಎಚ್.ಶಾಂತರಾಜ ಐತಾಳರ ಕೃತಿ ‘ಶ್ರೀ ಕೃಷ್ಣ 108’ ಎ.26ರ ಶನಿವಾರ ಸಂಜೆ 4:00ಕ್ಕೆ ಉಡುಪಿ ಕಿನ್ನಿಮುಲ್ಕಿಯ ಶ್ರೀದೇವಿ ಸಭಾಭವನದಲ್ಲಿ ಬಿಡುಗಡೆಗೊಳ್ಳಲಿದೆ.
ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ವಿಶ್ವಸ್ಥರೂ, ಪೇಜಾವರ ಮಠಾಧೀಶರೂ ಆಗಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕೃತಿ ಲೋಕಾರ್ಪಣೆಗೊಳಿಸ ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಲಿದ್ದಾರೆ.
ಕೃತಿ ಬಿಡುಗಡೆ ಸಮಾರಂಭದಲ್ಲಿ ಮೈಸೂರಿನ ಉದ್ಯಮಿ ಎಂ. ಕೃಷ್ಣದಾಸ ಪುರಾಣಿಕ, ಪೆರಂಪಳ್ಳಿ ವಾಸುದೇವ ಭಟ್, ಉಡುಪಿ ಉದ್ಯಮಿ ರಮೇಶ ರಾವ್ ಬೀಡು ಹಾಗೂ ವೈದ್ಯ ಡಾ. ಸಪ್ನ ಜೆ ಉಕ್ಕಿನಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಮಂಗಳೂರಿನ ಕಲ್ಕೂರ ಪ್ರಕಾಶನದಿಂದ ಈ ಕೃತಿಯು ಪ್ರಕಟಗೊಂಡಿದೆ.
ಉಡುಪಿಯ ಇಂಪುಗುಂಪು ಬಂಧುಗಳ ಸಹಯೋಗದೊಂದಿಗೆ ಜರಗಲಿರುವ ಕೃತಿ ಅನಾವರಣ ಕಾರ್ಯಕ್ರಮದಲ್ಲಿ ಕೃತಿಕರ್ತ ಎಚ್. ಶಾಂತರಾಜ ಐತಾಳರಿಗೆ ಕಲ್ಕೂರ ಪ್ರತಿಷ್ಠಾನದಿಂದ ‘ಕಲ್ಕೂರ ಸಾಹಿತ್ಯ ಭೂಷಣ’ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.