ವಲಸೆ ಕಾರ್ಮಿಕನ ಕೊಲೆ ಪ್ರಕರಣ ಭೇದಿಸಿದ ಉಡುಪಿ ಪೊಲೀಸರು; ಮೂವರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳು
ಉಡುಪಿ: ಒಂದು ವರ್ಷ ನಾಲ್ಕು ತಿಂಗಳ ಹಿಂದೆ ಕರಾವಳಿ ಜಂಕ್ಷನ್ ಬಳಿ ನಡೆದ ವಲಸೆ ಕಾರ್ಮಿಕನ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಳಕಲ್ ನಿವಾಸಿಗಳಾದ ಕನಕಪ್ಪ ಹನುಮಂತ ರೋಡಿ(46), ಯಮನೂರ ತಿಪ್ಪಣ್ಣ ಮಾರಣ ಬಸರಿ(24), ಯಮನೂರಪ್ಪಜೇಡಿ(26) ಬಂಧಿತ ಆರೋಪಿಗಳು.
ಗುಜರಿ ಹೆಕ್ಕುತ್ತಿದ್ದ ಸುಮಾರು 45 ರಿಂದ 48 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರನ್ನು 2023ರ ಅ.16ರಂದು ರಾತ್ರಿ ವೇಳೆ ಹೋಟೇಲ್ ಕರಾವಳಿ ಬಳಿ ಹರಿತವಾದ ಆಯುಧದಿಂದ ಬಲಕೈಯನ್ನು ಕಡಿದು ಕೊಲೆ ಮಾಡಲಾಗಿತ್ತು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ತನಿಖೆ ನಡೆಸಿದ ಪೊಲೀಸರು ಮೃತರನ್ನು ಹುಬ್ಬಳ್ಳಿಯ ಕಿತ್ತೂರ ಯಾನೆ ಸಿದ್ದಪ್ಪ ಶಿವನಪ್ಪಎಂದು ಗುರುತಿಸಿದ್ದರು. ಈ ಕುರಿತು ತನಿಖೆ ಮುಂದುವರೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಕೊಲೆ:
ಕಳೆದು ಹೋದ ಒಂದು ಬಟ್ಟೆ ವಿಚಾರದಲ್ಲಿ ಮೃತ ಸಿದ್ಧಪ್ಪ, ಆರೋಪಿ ಯಮನೂರ ತಿಪ್ಪಣ್ಣನ ಸ್ನೇಹಿತ ಚಿನ್ನು ಪಾಟೇಲ್ ಹುಬ್ಬಳ್ಳಿ ಎಂಬವರಿಗೆ ಹಲ್ಲೆ ಮಾಡುತ್ತಿದ್ದರು. ಅದನ್ನು ಪ್ರಶ್ನಿಸಲು ಹೋದ ಆರೋಪಿ ಯಮನೂರ ತಿಪ್ಪಣ್ಣಗೆ ಸಿದ್ಧಪ್ಪ ಹಲ್ಲೆ ಮಾಡಿದರೆನ್ನಲಾಗಿದೆ.
ಇದೇ ದ್ವೇಷದಿಂದ ಮರುದಿನ ಬೆಳಿಗ್ಗೆ ಯಮನೂರ ತಿಪ್ಪಣ್ಣ, ಕನಕಪ್ಪ, ಯಮನೂರಪ್ಪ ಜೇಡಿ ಸೇರಿಕೊಂಡು ಸಿದ್ದಪ್ಪನನ್ನು ಕೊಡಲಿಯಿಂದ ಹಲ್ಲೆ ಮಾಡಿ ಕೊಲೆಗೈದು ಪರಾರಿಯಾಗಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಉಡುಪಿ ನಗರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಎಸ್ಸೈ ಈರಣ್ಣ ಶಿರಗುಂಪಿ, ಎಎಸ್ಸೈಗಳಾದ ಜಯಕರ, ಹರೀಶ, ಸಿಬ್ಬಂದಿ ಸುರೇಶ್, ಅಬ್ದುಲ್ ಬಶೀರ್, ಸಂತೋಷ, ಸಂತೋಷ, ಹರೀಶ್, ಚೇತನ್, ಆನಂದ, ಹೇಮಂತ್ ಕುಮಾರ್, ಶಿವಕುಮಾರ್, ಸಂತೋಷ ಮತ್ತು ಸೆನ್ ಪೊಲೀಸ್ ಠಾಣೆಯ ಪ್ರವೀಣ ಕುಮಾರ್, ಪ್ರವೀಣ, ಸುದೀಪ್ ಈ ಕಾರ್ಯಾಚರಣೆ ನಡೆಸಿದ್ದಾರೆ.