ನ.30ರಂದು ಕೋಡಿ ಶಿಕ್ಷಣ ಸಂಸ್ಥೆಯಲ್ಲಿ ‘ಬ್ಯಾರಿಸ್ ಉತ್ಸವ-2024’
ಕುಂದಾಪುರ, ನ.27: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ’ಬ್ಯಾರಿಸ್ ಉತ್ಸವ- 2024’ ಎಂಬ ಶೀರ್ಷಿಕೆ ಅಡಿಯಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ಶಾಲಾ ವಾರ್ಷಿಕೋತ್ಸವವನ್ನು ನ.30 ಶನಿವಾರ ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಜಿ ಕೆ.ಎಂ ಅಬ್ದುಲ್ ರೆಹಮಾನ್ ಬ್ಯಾರಿ ಹೇಳಿದ್ದಾರೆ.
ಕುಂದಾಪುರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ಕರೆದ ಸುದ್ದಿಗೋಷ್ಟಿ ಮಾತನಾಡಿದ ಅವರು, ಮುಖ್ಯ ಅತಿಥಿಗಳಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಐಜಿಬಿಸಿ ಬೆಂಗಳೂರು ವಿಭಾಗದ ಚೇರ್ಮನ್, ಎಕೋಲೋಜಿಕಲ್ ಎಕನೋಮಿಸ್ಟ್, ಟ್ರಸ್ಟಿ ಆಲ್ ಟೆಕ್ ಫೌಂಡೇಶನ್ ಮತ್ತು ಪ್ರೇಮ್ ಜೈನ್ ಟ್ರಸ್ಟ್, ನವದೆಹಲಿಯ ಡಾ.ಚಂದ್ರ ಶೇಖರ್ ಹರಿಹರನ್, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಭಾಗವಹಿಸಲಿರುವರು ಎಂದರು.
ಐಜಿಬಿಸಿ ನೀಡಿದ ಪ್ಲಾಟಿನಮ್ ಪ್ರಶಸ್ತಿಯನ್ನು ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ಗೆ ಐಜಿಬಿಸಿ ಬೆಂಗಳೂರು ವಿಭಾಗದ ಚೇರ್ಮನ್ ಡಾ.ಚಂದ್ರಶೇಖರ್ ಹರಿಹರನ್ ಹಸ್ತಾಂತರಿಸಲಿರುವರು. ಇದೇ ಸಂದರ್ಭದಲ್ಲಿ ಬ್ಯಾರೀಸ್ ಎಜ್ಯುಕೇಶನ್ ಲೋಗೋ ಅನಾವರಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ, ಬರಹಗಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ, 2024ರಲ್ಲಿ ಡೆನ್ಮಾರ್ಕ್ನಲ್ಲಿ ನಡೆದ ವಿಶ್ವ ಅಗ್ನಿಶಾಮಕ ಕ್ರೀಡೆಯಲ್ಲಿ ಚಿನ್ನದ ಪದಕ ವಿಜೇತ ಅಶ್ವಿನ್ ಸನಿಲ್ ಅವರನ್ನು ಸನ್ಮಾನಿಸಲಾಗುವುದು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ ಎಂದು ಅವರು ತಿಳಿಸಿದರು.
ಮಾದರಿ ಶಿಕ್ಷಣ ಸಂಸ್ಥೆ: 1906ರಲ್ಲಿ ಹುಲ್ಲಿನ ಗುಡಿಸಲಲ್ಲಿ ಅರಳಿದ ಶಿಕ್ಷಣ ಕುಸುಮಕ್ಕಿಂದು 118 ರ ಹರೆಯ ಹಾಜಿ ಕ ಮೊಹಿದ್ದೀನ್ ಬ್ಯಾರಿ ಎಜುಕೇಶನ್ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷರಾಗಿ ದಿವಂಗತ ಹಾಜಿ ಮಾಸ್ಟರ್ ಮೆಹಮೂದ್ ಅವರ ನೇತೃತ್ವದಲ್ಲಿ ಮತ್ತು ಪರಊರ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದಾರಿ ದೀಪವಾಯಿತು ಎಂದು ಅವರು ಹೇಳಿದರು.
ಟ್ರಸ್ಟ್ ಸಂಚಾಲಕ ಸೈಯದ್ ಮೊಹಮ್ಮದ್ ಬ್ಯಾರಿ ಮಾರ್ಗದರ್ಶನದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಅತ್ಯುತ್ತಮ ಶೈಕ್ಷಣಿಕ ಸಾಧನೆಗಳ ಜೊತೆಗೆ ಪರಿಸರಸ್ನೇಹಿ ಚಟುವಟಿಕೆಗಳನ್ನು ಮಾಡುತ್ತಿದೆ. ಪರಿಸರ ಪ್ರೇಮಿ ಯಾಗಿರುವ ಇವರು ಹುಟ್ಟು ಹಾಕಿದ ’ಸ್ವಚ್ಛ ಕಡಲತೀರ-ಹಸಿರು ಕೋಡಿ’ ಅಭಿಯಾನವು ಪ್ರತಿ ತಿಂಗಳ ಕೊನೆಯ ರವಿವಾರ ನಿರಂತರ ನಡೆಯುತ್ತಿದ್ದು ಈವರೆಗೆ 35 ಹಂತವನ್ನು ಯಶಸ್ವಿಯಾಗಿ ಪೂರೈಸಿದೆ.
ಈ ವರ್ಷ ಸಿ.ಬಿ.ಎಸ್ಇ ಪಠ್ಯಕ್ರಮವನ್ನು ಒಳಗೊಂಡ ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ ನಿರಂತರವಾಗಿ ಪರಿಸರ ಪ್ರಜ್ಞೆಯನ್ನು ಮಕ್ಕಳಲ್ಲಿ ಮೂಡಿಸುವ ಮತ್ತು ಪ್ರತಿಯೊಂದು ಚಟುವಟಿಕೆಯಲ್ಲಿ ಪರಿಸರಸ್ನೇಹಿ ನಿಯಮಗಳಿಗೆ ಅನುಗುಣ ವಾಗಿ ಕಲಿಕೆಯನ್ನು ಉಂಟುಮಾಡುವಲ್ಲಿ ಮುಂಚೂಣಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (ಐಜಿಬಿಸಿ) ಇದರ ಗ್ರೀನ್ ಸ್ಕೂಲ್ ರೇಟಿಂಗ್ ಸಿಸ್ಟಮ್ ಇಂದ ಪ್ಲಾಟಿನಮ್ ರೇಟಿಂಗ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮ ಹಸಿರು ಶಾಲೆಯಾಗಿದೆ. ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ನಲ್ಲಿ ಅಂತರ್ಜಲ ಸಂರಕ್ಷಣೆಗಾಗಿ ಮಳೆ ನೀರು ಕೊಯ್ಲು ವಿಶೇಷವಾಗಿ ಅಳವಡಿಸಿಕೊಂಡ ಒಂದು ಮಾದರಿ ಶಿಕ್ಷಣ ಸಂಸ್ಥೆಯಾಗಿದೆ ಎಂದವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ವಿಶ್ವಾಸಿ ಡಾ.ಆಸೀಫ್ ಬ್ಯಾರಿ, ಬಿ.ಎಡ್ ಕಾಲೇಜು ಪ್ರಾಂಶುಪಾಲ ಸಿದ್ದಪ್ಪ, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್., ಡೀನ್ ಅಕಾಡೆಮಿಕ್ಸ್ ಡಾ.ಪೂರ್ಣಿಮಾ ಉಪಸ್ಥಿತರಿದ್ದರು.