ಡಿ.31ರಂದು ಸಾಸ್ತಾನ ಕೆಕೆಆರ್ ಟೋಲ್ ಕಂಪೆನಿ ವಿರುದ್ಧ ಕೋಟ ಜಿಪಂ ವ್ಯಾಪ್ತಿಯಲ್ಲಿ ಬಂದ್-ಪ್ರತಿಭಟನೆ
ಉಡುಪಿ, ಡಿ.28: ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ, ನಾಗರಿಕರು, ಸಂಘ-ಸಂಸ್ಥೆಗಳು, ಸ್ಥಳೀಯ ಗ್ರಾಪಂ ಗಳು, ಪ.ಪಂ. ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಸಾಸ್ತಾನ ಟೋಲ್‌ನಲ್ಲಿ ಸ್ಥಳೀಯರಿಗೆ ಶುಲ್ಕ ವಿನಾಯಿತಿ ನೀಡದ ಕೆಕೆಆರ್ ಟೋಲ್ ಕಂಪೆನಿ ವಿರುದ್ಧ ಡಿ.31ರಂದು ಕೋಟ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಬೆಳಗ್ಗೆ 9:30ರಿಂದ ಟೋಲ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಅಂದ್ರಾದೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಸ್ತಾನ ಟೋಲ್‌ನಲ್ಲಿ ಹಿಂದೆ ಸಂಸದರು, ಶಾಸಕರು ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋಟ ಜಿಪಂ ವ್ಯಾಪ್ತಿಯ ಎಲ್ಲಾ ವಾಹನಗಳಿಗೂ ಟೋಲ್ ವಿನಾಯಿತಿ ನೀಡಲಾಗಿತ್ತು ಹಾಗೂ ಕಳೆದ ಹಲವಾರು ವರ್ಷಗಳಿಂದ ಸ್ಥಳೀಯ ಎಲ್ಲಾ ವಾಹನಗಳು ಉಚಿತವಾಗಿ ಪ್ರಯಾಣಿಸುತ್ತಿದ್ದವು. ಆದರೆ ಇತ್ತೀಚೆಗೆ ಟೋಲ್ ವ್ಯವಸ್ಥೆ ಮತ್ತು ರಸ್ತೆ ನಿರ್ವಹಣೆ ಗುತ್ತಿಗೆದಾರ ನವಯುಗ ಕಂಪನಿಯು ಟೋಲ್ ಗುತ್ತಿಗೆ ಮತ್ತು ನಿರ್ವಹಣೆಯ ಹೊಣೆಯನ್ನು ಕೆಕೆಆರ್ ಕಂಪನಿಗೆ ಮಾರಾಟ ಮಾಡಿದ್ದು, ಇದೀಗ ಕೆಕೆಆರ್ ಸಂಸ್ಥೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಸ್ಥಳೀಯ ವಾಣಿಜ್ಯ ವಾಹನಗಳಿಗೆ ಶುಲ್ಕ ಪಡೆಯಲು ಪ್ರಾರಂಭಿಸಿತ್ತು ಎಂದರು.
ನಂತರ ಜಿಲ್ಲಾಡಳಿತ ಮತ್ತು ಸಂಸದರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಥಾಸ್ಥಿತಿ ಕಾಪಾಡಲು ಕೆಕೆಆರ್ ಕಂಪೆನಿಗೆ ನಿರ್ದೇಶನ ನೀಡಲಾಗಿತ್ತು. ಆದರೆ ಇತ್ತೀಚೆಗೆ ಮತ್ತೊಮ್ಮೆ ವಾಣಿಜ್ಯ ವಾಹನಗಳಿಗೆ ಶುಲ್ಕ ಪಡೆಯಲು ಡಿ.30ರ ನಂತರ ಪ್ರಾರಂಭಿಸುವುದಾಗಿ ತಿಳಿದುಬಂದಿದೆ. ಕೆಕೆಆರ್ ಕಂಪೆನಿ ರಸ್ತೆಯನ್ನು ಗುತ್ತಿಗೆ ಪಡೆದು ಒಂದು ವರ್ಷವಾದರೂ ಕೂಡ ಸಮರ್ಪಕವಾಗಿ ರಸ್ತೆ ನಿರ್ವಹಣೆಯನ್ನು ಮಾಡದೆ ಉಡಾಫೆ ಪ್ರವೃತ್ತಿಯನ್ನು ತೋರಿಸುತ್ತಿದೆ ಮತ್ತು ಅವರಿಂದ ಸಮರ್ಪಕ ಕಾಮಗಾರಿ ಮಾಡಿಸಲಾಗದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಅಲ್ಲದೇ ದಾರಿದೀಪ ನಿರ್ವಹಣೆ ತೀವ್ರ ಕಳಪೆಯಾಗಿದೆ. ಪಾದಾಚಾರಿ ದಾರಿಗಳಲ್ಲಿ ಭಾರಿ ಗಾತ್ರದ ಹೊಂಡಗಳು ಬಿದ್ದು ನಡೆಯುವುದೇ ಕಷ್ಟವಾಗಿದೆ. ಡಿವೈಡರ್‌ಗಳ ಬದಿಯಲ್ಲಿ ಕಸದ ರಾಶಿಗಳುಸ ಮಣ್ಣುಗಳು ಬಿದ್ದು ಕೊಂಡಿದೆ. ರಸ್ತೆ ಬದಿಯಲ್ಲಿ ಹುಲ್ಲುಗಳು ಹುಲುಸಾಗಿ ಬೆಳೆದು ನಿಂತಿವೆ. ಸಾಸ್ತಾನ ಟೋಲ್ ಗಳಲ್ಲಿ ದೊಡ್ಡ ದೊಡ್ಡ ಟ್ರಕ್‌ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದು ಬೈಕ್, ರಿಕ್ಷಾ ಮತ್ತು ಪಾದಚಾರಿಗಳಿಗೆ ಸಾಗಲು ಬಾರೀ ತೊಂದರೆಯಾಗುತ್ತಿದೆ. ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.
ಅಲ್ಲದೇ ಈ ಹೆದ್ದಾರಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಗಂಭೀರ ಅಪಘಾತವಾಗುವ ಬ್ಲ್ಯಾಕ್ ಸ್ಪಾಟ್‌ಗಳು ನಿರ್ಮಾಣವಾಗಿವೆ ಹಾಗೂ ದಿನನಿತ್ಯ ಹತ್ತು-ಹಲವು ಅಪಘಾತಗಳ ಮೂಲಕ ಶಾಶ್ವತ ಅಂಗವಿಕಲತೆ ಹಾಗೂ ಸಾವು-ನೋವುಗಳು ಸಂಭವಿ ಸುತ್ತಿವೆ. ಈ ಬಗ್ಗೆ ಎಚ್ಚೆತ್ತುಕೊಳ್ಳದ ಕೆಕೆಆರ್ ಕಂಪನಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಸಮರ್ಪಕವಾದ ನಿರ್ವಹಣೆ ಮತ್ತು ಬೇಜವಾಬ್ದಾರಿಯ ಉಡಾಫೆಯ ನಡವಳಿಕೆ ವಿರುದ್ಧ ಈ ಹೋರಾಟ ನಡೆಸ ಲಾಗುತ್ತಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠಲ್ ಪೂಜಾರಿ, ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಪಾಂಡೇಶ್ವರ ಗ್ರಾಪಂ ಅಧ್ಯಕ್ಷೆ ಸುಶೀಲ ಪೂಜಾರಿ, ಐರೋಡಿ ಗ್ರಾಪಂ ಸದಸ್ಯ ನಟರಾಜ್ ಗಾಣಿಗ, ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಭರತ್ ಶೆಟ್ಟಿ, ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ವಡ್ಡರ್ಸೆ ಗ್ರಾಪಂ ಸದಸ್ಯ ಹರೀಶ್ ಶೆಟ್ಟಿ, ಲಾರಿ ಮಾಲಕರ ಸಂಘದ ಗೌರವಾಧ್ಯಕ್ಷ ಭೋಜ ಪೂಜಾರಿ, ಹೆದ್ದಾರಿ ಜಾಗ್ರತಿ ಸಮಿತಿ ಸದಸ್ಯರಾದ ನಾಗರಾಜ ಗಾಣಿಗ, ಪ್ರಶಾಂತ್ ಶೆಟ್ಟಿ ಸಂದೀಪ್ ಕುಂದರ್, ಮಹಾಬಲ ಪೂಜಾರಿ ಉಪಸ್ಥಿತರಿದ್ದರು.
ಸಾಲಿಗ್ರಾಮ ಪ.ಪಂ., 6 ಗ್ರಾಪಂಗಳು ಬೆಂಬಲ
ಈ ಹೋರಾಟಕ್ಕೆ ಸ್ಥಳೀಯ ಜಿಪಂ ಕೋಟ ಕ್ಷೇತ್ರ ವ್ಯಾಪ್ತಿಯ ಆರು ಗ್ರಾಪಂಗಳಾದ ಪಾಂಡೇಶ್ವರ, ಐರೋಡಿ, ಕೋಟ, ಕೋಟತಟ್ಟು, ವಡ್ಡರ್ಸೆ, ಕೋಡಿ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗಳು ಈಗಾಗಲೇ ಬೆಂಬಲ ಸೂಚಿಸಿದೆ. ಟೋಲ್‌ನಲ್ಲಿ ಸ್ಥಳೀಯರಿಗೆ ಶುಲ್ಕ ವಿನಾಯಿತಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣದ ಬಗ್ಗೆ ಆಗ್ರಹಿಸಿ ಎಲ್ಲಾ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್‌ನಲ್ಲಿ ನಿರ್ಣಯಕೈಗೊಳ್ಳಲಾಗಿದೆ ಎಂದು ಆಲ್ವಿನ್ ಅಂದ್ರಾದೆ ತಿಳಿಸಿದರು.
ಈ ಸಮಸ್ಯೆಗಳ ಕುರಿತು ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಡಿ.30ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಯನ್ನು ಕರೆಯಲಾಗಿದ್ದು, ಈ ಸಭೆಯಲ್ಲಿ ಎಲ್ಲ ಸಮಸ್ಯೆಗಳಿಗೂ ತಾರ್ಕಿಕ ಅಂತ್ಯ ದೊರೆಯಬೇಕು. ಇಲ್ಲದಿದ್ದರೆ ಧರಣಿಯನ್ನು ತೀವ್ರಗೊಳಿಸಿ ಮುಂದುವರೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.