ಉಡುಪಿ : ಸೆಪ್ಟೆಂಬರ್ ತಿಂಗಳಲ್ಲಿ ಶೇ.31 ಹೆಚ್ಚು ಮಳೆ, ಆದರೆ ಒಟ್ಟಾರೆ ಶೇ.24ರಷ್ಟು ಮಳೆ ಕೊರತೆ
► ಮಳೆಗಾಲದ ನಾಲ್ಕು ತಿಂಗಳಲ್ಲಿ ಜಿಲ್ಲೆಗೆ ಶೇ.22ರಷ್ಟು ಮಳೆ ಕೊರತೆ ► ಬರ ಪೀಡಿತ ತಾಲೂಕುಗಳ ಸಾಲಿಗೆ ಹೆಬ್ರಿ ಸಹ ಸೇರೀತೇ?
-ಬಿ.ಬಿ.ಶೆಟ್ಟಿಗಾರ್
ಉಡುಪಿ, ಸೆ.30: ರಾಜ್ಯದ 195 ತಾಲೂಕುಗಳು ಬರಪೀಡಿತ ಎಂದು ರಾಜ್ಯ ಸರಕಾರದ ಘೋಷಣೆ ಹಾಗೂ ಮಳೆ ಕೊರತೆಯಿಂದ ಕಾವೇರಿಯಲ್ಲಿ ನೀರು ಹರಿಯದೇ ಕರ್ನಾಟಕ-ತಮಿಳುನಾಡಿನ ನಡುವೆ ಕಾವೇರಿ ನದಿ ನೀರಿನ ಹಂಚಿಕೆ ವಿವಾದ ತಾರಕ್ಕೇರುತ್ತಿರುವ ನಡುವೆಯೇ ನೈಋತ್ಯ ಮುಂಗಾರು ಮಳೆ ಸುರಿಯುವ ಮಳೆಗಾಲ ಇಂದಿಗೆ ಅಧಿಕೃತವಾಗಿ ಕೊನೆಗೊಂಡಿದೆ.
ರಾಜ್ಯ ಹಿಂದೆಂದೂ ಕಾಣದಂಥ ಮಳೆ ಕೊರತೆ ಕಾಣಿಸಿಕೊಂಡ ಈ ಬಾರಿಯ ಮಳೆಗಾಲದ ಬಿಸಿ, ಜಿರಾಪಟ್ಟಿ ಮಳೆ ಸುರಿಯುವ ಕರಾವಳಿಯ ಜಿಲ್ಲೆಗಳಿಗೂ ತಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಮಳೆ ಕೊರತೆ ಎಂಬುದನ್ನೇ ಕಂಡು-ಕೇಳಿ-ಅರಿಯದ ಕಾಣದ ಕರಾವಳಿ ಜಿಲ್ಲೆಯಲ್ಲಿ ಈ ಬಾರಿ ಅಭೂತಪೂರ್ವವೆಂಬಂತೆ ಭಾರೀ ಮಳೆಯ ಕೊರತೆ ಕಾಣಿಸಿಕೊಂಡಿದೆ ಎಂಬುದು ಆಶ್ಚರ್ಯದ ಸಂಗತಿ. ಇದು ಜಿಲ್ಲೆಯ ದೈನಂದಿನ ಸ್ಥಿತಿಗತಿಯ ಮೇಲೆ ಮುಂಬರುವ ದಿನಗಳಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗದು.
ಶೇ.24ರಷ್ಟು ಮಳೆ ಕೊರತೆ: ಈ ವರ್ಷದ ಪ್ರಾರಂಭದಿಂದ ಇಂದಿನವರೆಗೆ (ಅಂದರೆ ಜನವರಿ 1ರಿಂದ ಸೆ.30ರವರೆಗೆ) ಲೆಕ್ಕ ಹಿಡಿದರೆ ಜಿಲ್ಲೆಯಲ್ಲಿ ಬೀಳಬೇಕಿದ್ದ ವಾಡಿಕೆ ಮಳೆ 4223 ಮಿ.ಮೀ. ಆಗಿದ್ದರೆ ಈ ಬಾರಿ ಬಿದ್ದಿರುವುದು 3210ಮಿ.ಮೀ. ಮಾತ್ರ. ಅಂದರೆ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಶೇ.24ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದೆ.
ಜೂನ್ ತಿಂಗಳಲ್ಲಿ ಶೇ.53 ಹಾಗೂ ಆಗಸ್ಟ್ ತಿಂಗಳಲ್ಲಿ ಶೇ.72ರಷ್ಟು ಮಳೆಯಲ್ಲಿ ಕೊರತೆ ಕಾಣಿಸಿಕೊಂಡ ಬಳಿಕ ನಿರ್ಣಾಯಕವಾದ ಸೆಪ್ಟೆಂಬರ್ ತಿಂಗಳಲ್ಲಿ ಬಂದಿರುವುದು ಶೇ.31ರಷ್ಟು ಹೆಚ್ಚುವರಿ ಮಳೆ ಮಾತ್ರ. ಇದು ಹಿಂದಿನ ಮೂರು ತಿಂಗಳ ಮಳೆಯ ಕೊರತೆಯನ್ನು ತುಂಬಲು ಸಾಕಾಗಲಿಲ್ಲ. ಸೆಪ್ಟಂಬರ್ ತಿಂಗಳಲ್ಲಿ ಜಿಲ್ಲೆಯ ವಾಡಿಕೆ ಮಳೆ 405 ಮಿ.ಮೀ. ಆಗಿದ್ದರೆ, ಈ ಬಾರಿ 530 ಮಿ.ಮೀ. ಮಳೆ ಜಿಲ್ಲೆಯಲ್ಲಿ ಬಿದ್ದಿತ್ತು.
ಕೊರತೆಯ ಮಳೆಗಾಲ: ವರ್ಷದ 9 ತಿಂಗಳನ್ನು ಗಣನೆಗೆ ತೆಗೆದುಕೊಳ್ಳದೇ ಕೇವಲ ಮಳೆಗಾಲದ ನಾಲ್ಕು ತಿಂಗಳನ್ನು (ಜೂನ್ 1ರಿಂದ ಸೆಪ್ಟಂಬರ್ 30ರವರೆಗೆ) ಮಾತ್ರ ಗಣನೆಗೆ ತೆಗೆದು ಕೊಂಡಾಗಲೂ ಈ ಬಾರಿ ಶೇ.22ರಷ್ಟು ಕೊರತೆ ಎದ್ದು ಕಾಣುತ್ತಿದೆ. ಈ ನಾಲ್ಕು ತಿಂಗಳಲ್ಲಿ ಜಿಲ್ಲೆಯ ವಾಡಿಕೆ ಮಳೆ 4022ಮಿ.ಮೀ. ಆಗಿದ್ದರೆ, ಈ ಬಾರಿ ನಾಲ್ಕು ತಿಂಗಳಲ್ಲಿ ಬಿದ್ದಿರುವುದು3156 ಮಿ.ಮೀ. ಮಾತ್ರ.
ಪ್ರತಿ ಮಳೆಗಾಲದಲ್ಲೂ ತಿಂಗಳುವಾರು ಬಿದ್ದ ಮಳೆಯ ಲೆಕ್ಕಾಚಾರ ತೆಗೆದುಕೊಂಡಾಗ ಉಡುಪಿ ಜಿಲ್ಲೆಯಲ್ಲಿ ಯಾವತ್ತೂ ಮಳೆಗೆ ಕೊರತೆಯಾಗಿದ್ದೇ ಇಲ್ಲ. ಒಂದು ತಿಂಗಳು ವಾಡಿಕೆಗಿಂತ ಸ್ವಲ್ಪ ಕಡಿಮೆ ಮಳೆ ಬಿದ್ದರೆ, ಮುಂದಿನ ತಿಂಗಳು ಅದು ತುಂಬಿಕೊಳ್ಳುವಂತೆ ಮಳೆ ಬೀಳುವುದು ಇಲ್ಲಿ ಸಂಪ್ರದಾಯದಂತೆ ನಡೆದುಕೊಂಡು ಬಂದ ಪದ್ಧತಿ. ಆದರೆ ಈ ಬಾರಿ ಈ ಸಂಪ್ರದಾಯವೇ ಮುರಿದುಬಿದ್ದಿದೆ.
ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಸುರಿಯುವ ಮೇ ತಿಂಗಳಲ್ಲಿ ಶೇ.73ರಷ್ಟು ಮಳೆ ಕೊರತೆ ಕಾಣಿಸಿಕೊಂಡಿತ್ತು. ವಾಡಿಕೆಯಂತೆ ಜೂನ್ ಮೊದಲ ದಿನದ ಬದಲು ಈ ಬಾರಿ ಜೂ.10ರಂದು ಮಳೆಗಾಲ ಜಿಲ್ಲೆಯನ್ನು ಪ್ರವೇಶಿಸಿದ್ದರೂ ಆ ತಿಂಗಳಿಡೀ ಶೇ.53ರಷ್ಟು ಮಳೆಗೆ ಕೊರತೆ ಇತ್ತು. ಈ ಮೂಲಕ ಕರಾವಳಿ ಜಿಲ್ಲೆಗಳ ಕುರಿತಂತೆ ಇದೇ ಮೊದಲ ಬಾರಿ ಪ್ರಕೃತಿ ಮುನಿದುಕೊಂಡಂತೆ ಇದು ಜಿಲ್ಲೆಯಲ್ಲಿ ಭತ್ತದ ಬೇಸಾಯ ಮೇಲೆ ತೀವ್ರ ಪರಿಣಾಮ ಬೀರಿತು.
ಜುಲೈ ತಿಂಗಳಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸುವಂತೆ ಕಂಡುಬಂದಿದ್ದು, ಮೊದಲ ಹತ್ತು ದಿನ ಧಾರಾಕಾರ ಮಳೆ ಸುರಿದು ಹೆಚ್ಚಿನ ಕಡೆಗಳಲ್ಲಿ ನೆರೆಯೂ ಕಾಣಿಸಿಕೊಂಡಿತ್ತು. ತಿಂಗಳ ಕೊನೆಯ ವೇಳೆಗೆ ಶೇ.25ರಷ್ಟು ಹೆಚ್ಚು ಮಳೆ ಬಿದ್ದಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಮತ್ತೆ ಮಳೆ ಸಂಪೂರ್ಣ ಕೈಕೊಟ್ಟಿತು. ಮಳೆಗಾಲದ ನಟ್ಟನಡುವಿನ ಅವಧಿಯಲ್ಲಿ ಜನತೆ ಕಡುಬೇಸಿಗೆಯ ದಿನಗಳ ಅನುಭವ ಪಡೆದರು. ಈ ತಿಂಗಳಲ್ಲಿ ಮಳೆಯ ಕೊರತೆ ಶೇ.73ಕ್ಕೆ ನೆಗೆಯಿತು. ನಿಜವಾಗಿಯೂ ಇದು ತಡವಾಗಿ ನಾಟಿ ಮಾಡಿದ ಭತ್ತದ ಗದ್ದೆಗಳನ್ನು ಒಣಗಿಸಿದ್ದಲ್ಲದೇ ಬೆಳೆಯೊಂದಿಗೆ, ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆಯ ಭೀತಿ ಹಾಗೂ ಆತಂಕಕ್ಕೆ ಕಾರಣವಾಯಿತು.
ಹೆಬ್ರಿ ತಾಲೂಕಿನಲ್ಲಿ ಅತೀ ಹೆಚ್ಚು ಕೊರತೆ: ಕರಾವಳಿ ಜಿಲ್ಲೆಗಳಿಗೆ ಮಳೆಯನ್ನು ತರುವ ಪಶ್ಚಿಮ ಘಟ್ಟದ ತಪ್ಪಲಲ್ಲೇ ಇರುವ ಹೆಬ್ರಿ ಹಾಗೂ ಕಾರ್ಕಳ ತಾಲೂಕುಗಳಲ್ಲಿ ಈ ಬಾರಿ ಅತಿ ಹೆಚ್ಚಿನ ಮಳೆ ಕೊರತೆ ಕಾಣಿಸಿಕೊಂಡಿದೆ. ಹೆಬ್ರಿ ತಾಲೂಕಿನಲ್ಲಿ ಒಟ್ಟಾರೆಯಾಗಿ ಶೇ.37ರಷ್ಟು ಮಳೆ ನೀರಿನ ಕೊರತೆ ಕಾಣಿಸಿಕೊಂಡಿದ್ದರೆ, ಮಳೆಗಾಲದ ನಾಲ್ಕು ತಿಂಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಶೇ.35 ಕೊರತೆ ಕಂಡುಬಂದಿದೆ. ಇದರ ನಂತರದ ಕೊರತೆ ಇರುವುದು ಕಾರ್ಕಳ ತಾಲೂಕಿನಲ್ಲಿ ಒಟ್ಟಾರೆಯಾಗಿ ಶೇ.26ರಷ್ಟು ಮಳೆ ಕೊರತೆ ಇರುವ ಇಲ್ಲಿ ಮಳೆಗಾಲದ ಅವಧಿಯಲ್ಲೇ ಶೇ.24ರಷ್ಟು ಕೊರತೆ ಕಂಡುಬಂದಿದೆ.
ರಾಜ್ಯ ಸರಕಾರ ಘೋಷಿಸಿದ ತೀವ್ರ ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಈಗಾಗಲೇ ಕಾರ್ಕಳ ಕಾಣಿಸಿಕೊಂಡಿದ್ದರೆ, ಹೆಬ್ರಿಯೂ ಇದೇ ಸನ್ನಿವೇಶವನ್ನು ಎದುರಿಸುತ್ತಿದೆ. ಇವೆರಡರ ನಂತರ ಮೂರನೇ ಸ್ಥಾನದಲ್ಲಿರುವ ಬ್ರಹ್ಮಾವರ ತಾಲೂಕು (ಶೇ.23 ಮತ್ತು ಶೇ.20) ಈಗಾಗಲೇ ಸಾಧಾರಣ ಬರಪೀಡಿತ ಪ್ರದೇಶದಲ್ಲಿ ಗುರುತಿಸಿಕೊಂಡಿದೆ.
*ಜಿಲ್ಲೆಯಲ್ಲಿ ಜನವರಿಯಿಂದ ಸೆಪ್ಟಂಬರವರೆಗೆ ಬಿದ್ದ ಮಳೆ ವಿವರ
ತಾಲೂಕು - ವಾಡಿಕೆ ಮಳೆ - ಬಿದ್ದ ಮಳೆ - ಕೊರತೆ
ಕಾರ್ಕಳ - 4339ಮಿ.ಮೀ.- 3190ಮಿ.ಮೀ - 26
ಕುಂದಾಪುರ - 3553ಮಿ.ಮೀ. - 3210ಮಿ.ಮೀ. -10
ಉಡುಪಿ- 3581ಮಿ.ಮೀ.- 3030ಮಿ.ಮೀ. -15
ಬೈಂದೂರು- 4161ಮಿ.ಮೀ. -3420ಮಿ.ಮೀ. -18
ಬ್ರಹ್ಮಾವರ - 3728ಮಿ.ಮೀ. - 2754ಮಿ.ಮೀ. -23
ಕಾಪು -3454ಮಿ.ಮೀ. - 3077ಮಿ.ಮೀ. -11
ಹೆಬ್ರಿ - 5471ಮಿ.ಮೀ. - 3466ಮಿ.ಮೀ. -37
ಜಿಲ್ಲೆ ಸರಾಸರಿ - 4223ಮಿ.ಮೀ. - 3210ಮಿ.ಮೀ. -24
*ಮಳೆಗಾಲದ ನಾಲ್ಕು ತಿಂಗಳಲ್ಲಿ (ಜೂ.-ಸೆ.)ಬಿದ್ದ ಮಳೆ ವಿವರ
ತಾಲೂಕು- ವಾಡಿಕೆ ಮಳೆ - ಬಿದ್ದ ಮಳೆ - ಕೊರತೆ
ಕಾರ್ಕಳ - 4117ಮಿ.ಮೀ. - 3131ಮಿ.ಮೀ -24
ಕುಂದಾಪುರ - 3335ಮಿ.ಮೀ.- 3176ಮಿ.ಮೀ. -05
ಉಡುಪಿ - 3367ಮಿ.ಮೀ. - 2945ಮಿ.ಮೀ. -13
ಬೈಂದೂರು - 3941ಮಿ.ಮೀ. - 3383ಮಿ.ಮೀ. -14
ಬ್ರಹ್ಮಾವರ - 3527ಮಿ.ಮೀ. - 2816ಮಿ.ಮೀ. -20
ಕಾಪು - 3216ಮಿ.ಮೀ. - 2995ಮಿ.ಮೀ. -07
ಹೆಬ್ರಿ - 5268ಮಿ.ಮೀ. - 3400ಮಿ.ಮೀ. -35
ಜಿಲ್ಲೆ ಸರಾಸರಿ - 4022ಮಿ.ಮೀ. -3156ಮಿ.ಮೀ. -22
*ಜಿಲ್ಲೆಯಲ್ಲಿ ಸೆಪ್ಟಂಬರ್ ತಿಂಗಳಲ್ಲಿ ಬಿದ್ದ ಮಳೆ ವಿವರ
ತಾಲೂಕು -ವಾಡಿಕೆ ಮಳೆ - ಬಿದ್ದ ಮಳೆ - ಹೆಚ್ಚುವರಿ
ಕಾರ್ಕಳ - 422ಮಿ.ಮೀ. - 553ಮಿ.ಮೀ +31
ಕುಂದಾಪುರ - 353ಮಿ.ಮೀ. - 535ಮಿ.ಮೀ. +51
ಉಡುಪಿ - 340ಮಿ.ಮೀ. - 462ಮಿ.ಮೀ. +36
ಬೈಂದೂರು - 445ಮಿ.ಮೀ. - 550ಮಿ.ಮೀ. +23
ಬ್ರಹ್ಮಾವರ - 374ಮಿ.ಮೀ. - 436ಮಿ.ಮೀ. +16
ಕಾಪು - 337ಮಿ.ಮೀ. - 511ಮಿ.ಮೀ. +52
ಹೆಬ್ರಿ - 515ಮಿ.ಮೀ. - 596ಮಿ.ಮೀ. +16
ಜಿಲ್ಲೆ ಸರಾಸರಿ - 405ಮಿ.ಮೀ. - 530ಮಿ.ಮೀ. +31