ಡಿ.4: ಹಿಂದು ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ
ಉಡುಪಿ, ಡಿ.3: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕೊಲೆ ಹಾಗೂ ಹಿಂಸೆಯನ್ನು ಖಂಡಿಸಿ, ದೇವಸ್ಥಾನಗಳ ಮೇಲಿನ ದಾಳಿಯನ್ನು ನಿಲ್ಲಿಸಲು ಒತ್ತಾಯಿಸಿ ಹಿಂದೂ ಹಿತರಕ್ಷಣಾ ಸಮಿತಿ ನಾಳೆ ಉಡುಪಿಯಲ್ಲಿ ಪ್ರತಿಭಟನಾ ಜಾಥ ನಡೆಸಲಿದೆ ಎಂದು ಸಮಿತಿಯ ಸಂಚಾಲಕ ರಾಧಾಕೃಷ್ಣ ಮೆಂಡನ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ಅಪರಾಹ್ನ 3 ಗಂಟೆಗೆ ಜೋಡುಕಟ್ಟೆಯಿಂದ ಪ್ರತಿಭಟನಾ ಜಾಥಾ ಪ್ರಾರಂಭಗೊಳ್ಳಲಿದ್ದು, ಜಾಥಾವು ಕೋರ್ಟ್ ರೋಡ್, ಕೆ.ಎಂ.ಮಾರ್ಗ ಮೂಲಕ ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ನಿಲ್ದಾಣ, ಕಲ್ಸಂಕದಿಂದ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶಕ್ಕೆ ತೆರಳಲಿದ್ದು, ಅಲ್ಲಿ ಸಂಎಜೆ 4:30ಕ್ಕೆ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರ ಅದ್ಯಕ್ಷತೆಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದರು.
ಸಭೆಯಲ್ಲಿ ಸಾವಿರಾರು ಮಂದಿ ಸೇರುವ ನಿರೀಕ್ಷೆ ಇದೆ ಎಂದ ಅವರು, ಬಾಂಗ್ಲಾದೇಶದಲ್ಲಿರುವ ಹಿಂದುಗಳಿಗೆ ರಕ್ಷಣೆ ನೀಡುವಂತೆ ಬಾಂಗ್ಲಾ ಸರಕಾರದ ಮೇಲೆ ಒತ್ತಡ ಹೇರಲು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಇಸ್ಕಾನ್ ಉಡುಪಿ ಮುಖ್ಯಸ್ಥ ಗೋವಿಂದದಾಸ್, ಸಮಿತಿಯ ಪ್ರಮುಖರಾದ ರಂಜಿತ್ ಹಾವಂಜೆ, ಅಖಿಲೇಶ್ ಉಪಸ್ಥಿತರಿದ್ದರು.