ಅ.5ರಿಂದ ಉಡುಪಿ ಜಿಲ್ಲೆಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆ
ಉಡುಪಿ: ಕರ್ನಾಟಕ ಸಂಭ್ರಮ-೫೦ರಡಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನದ ಅಂಗವಾಗಿ ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದು, ಅ.5ರಿಂದ 10ರವರೆಗೆ ಆರು ದಿನಗಳ ಕಾಲ ಉಡುಪಿ ಜಿಲ್ಲೆಯಲ್ಲಿ ವಿವಿಧೆಡೆ ಸಂಚರಿಸಲಿದೆ.
ಅ.5ರಂದು ರಥವು ಕಾರ್ಕಳ ತಲುಪಲಿದ್ದು, ವಿಧಾನ ಪರಿಷತ್ ಉಪ ಚುನಾವಣೆ ಪ್ರಯುಕ್ತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರಳವಾಗಿ ಕಾರ್ಯಕ್ರಮವನ್ನು ಅಂದು ಬೆಳಿಗ್ಗೆ 11 ಗಂಟೆಗೆ ಕಾರ್ಕಳ ತಾಲೂಕು ಆಡಳಿತದ ವತಿಯಿಂದ ಕಾರ್ಕಳ ಪ್ರವಾಸಿ ಮಂದಿರದಲ್ಲಿ ಕನ್ನಡ ರಥಕ್ಕೆ ಪೂಜೆ, ಗೌರವ ಸಲ್ಲಿಸಿಕೊಳ್ಳಲಾಗುವುದು.
ರಥಯಾತ್ರೆಯು ಅ.6ರಂದು ಕಾಪು, 7ರಂದು ಉಡುಪಿ, 8ರಂದು ಬ್ರಹ್ಮಾವರ, 9ರಂದು ಕುಂದಾಪುರ ಹಾಗೂ 10ರಂದು ಬೈಂದೂರು ಆಗಮಿಸಿ ಮುಂದಕ್ಕೆ ಶಿವಮೊಗ್ಗದ ಹೊಸನಗರಕ್ಕೆ ತೆರಳಲಿದೆ. ಈ ಸಂದರ್ಭದಲ್ಲಿ ಕನ್ನಡಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.