‘ಕರ್ನಾಟಕ’ ನಾಮಕರಣಕ್ಕೆ 50 ವರ್ಷ; ಆಚರಣೆಗೆ ವಿಶೇಷ ಸೂಚನೆ
ಉಡುಪಿ, ಅ.27: ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ 2023ನೇ ಸಾಲಿನ ಕನ್ನಡ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕಾರ್ಯಕ್ರಮದ ಸ್ವರೂಪವನ್ನು ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಕೆ. ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅದರಂತೆ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತದ ವತಿಯಿಂದ ಈ ಕೆಳಗಿನ ಅಂಶಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ನಿರ್ದೇಶಿಸಿದ್ದಾರೆ ಎಂದವರು ಹೇಳಿದ್ದಾರೆ.
*ನ.1ರಂದು ರಾಜ್ಯದ ಎಲ್ಲಾ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ ಕರ್ನಾಟಕ ಸಂಭ್ರಮ-50 ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷ ವಾಕ್ಯವನ್ನು ಬರೆಯಬೇಕು.
*ನ.1ರಂದು ಬೆಳಗ್ಗೆ 9:00ಗಂಟೆಗೆ ಎಲ್ಲಾ ಆಕಾಶವಾಣಿ ಕೇಂದ್ರಗಳಲ್ಲಿ (ರೇಡಿಯೋ) ನಾಡಗೀತೆಯನ್ನು ಪ್ರಸಾರ ಮಾಡ ಲಾಗುತ್ತದೆ. ಈ ಸಮಯದಲ್ಲಿ ಕನ್ನಡ ನಾಡಿನ ಸಮಸ್ತ ನಾಗರಿಕರು ಎದ್ದು ನಿಂತು ರಾಷ್ಟ್ರ ಗೀತೆಗೆ ಗೌರವ ಸಲ್ಲಿಸುವ ರೀತಿಯಲ್ಲಿ ನಾಡಗೀತೆಗೂ ಗೌರವ ಸಲ್ಲಿಸಬೇಕು.
ನ.1ರ ಸಂಜೆ 5 ಗಂಟೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳ ಮೈದಾನ ಗಳಲ್ಲಿ ಕೆಂಪು ಹಳದಿ ಬಣ್ಣದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಸುವರ್ಣ ಸಂಭ್ರಮ ಗಾಳಿಪಟ ಉತ್ಸವ ಆಚರಿಸಬೇಕು.
ನ.1ರ ಸಂಜೆ 7:00ಗಂಟೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳ ಮನೆಗಳ ಮುಂದೆ, ಕಚೇರಿಗಳ ಮುಂದೆ ಹಾಗೂ ಅಂಗಡಿ ಮಳಿಗೆಗಳ ಮುಂದೆ ಹಣತೆ (ದೀಪ) ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಬೇಕು.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮೇಲೆ ಸೂಚಿಸಿರುವ ಅಂಶಗಳನ್ನು ಅಳವಡಿಸಿಕೊಂಡು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.