500ಕ್ಕೂ ಅಧಿಕ ಮಂದಿಗೆ 75ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ
ಉಡುಪಿ, ಆ.9: ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆ, ಮುದರಂಗಡಿ ಸಮರ್ಪಣ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ವಿದ್ಯಾಪೋಷಕ ನಿಧಿ ವಿದ್ಯಾರ್ಥಿ ವೇತನ ವಿತರಣೆ, ಶೈಕ್ಷಣಿಕ ಪ್ರೇರಣ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಮಣಿಪಾಲ ಹೌಸಿಂಗ್ ಫೈನಾನ್ಸ್ ಮತ್ತು ಸಿಂಡಿಕೇಟ್ ಲಿ. ಸಂಸ್ಥಾಪಕ ತೋನ್ಸೆ ನಾರಾಯಣ ಪೈ ಉದ್ಘಾಟಿಸಿದರು. 500ಕ್ಕೂ ಹೆಚ್ಚಿನ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರನ್ನು ಕಳೆದು ಕೊಂಡಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ದತ್ತು ಯೋಜನೆಯ ಮೂಲಕ 75 ಲಕ್ಷ ರೂ. ವಿತರಿಸಲಾಯಿತು.
ಕರ್ಣಾಟಕ ಬ್ಯಾಂಕ್ ಮಂಗಳೂರು ಪ್ರಧಾನ ಕಚೇರಿಯ ಚೀಫ್ ಬ್ಯುಸಿನೆಸ್ ಆಫೀಸರ್ ಗೋಕುಲದಾಸ ಪೈ ಮಾತನಾಡಿ ದರು. ನ್ಯಾಚುರಲ್ ಐಸ್‌ಕ್ರೀಮ್‌ನ ರಘುನಂದನ ಎಸ್. ಕಾಮತ್, ದಿ.ಎಂ.ವಿ. ಕಿಣಿಯವರ ಸಂಸ್ಮರಣೆ ಭಾಷಣ ಮಾಡಿ ದರು. ಬೆಂಗಳೂರು ವಿಪ್ರೋ ಎಚ್‌ಆರ್ ವಿಭಾಗದ ಜಿಎಂ ಪ್ರವೀಣ ಕಾಮತ್ ಕುಂಬ್ಳೆ ದಿಕ್ಸೂಚಿ ಭಾಷಣಗೈದರು. ಕಲ್ಯಾಣಪುರ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅನಂತಪದ್ಮನಾಭ ಕಿಣಿ ಅಧ್ಯಕ್ಷತೆ ವಹಿಸಿದ್ದರು.
ಮೈಸೂರು ಪೈ ಗ್ರೂಪ್ ಆಫ್ ಹೊಟೇಲ್ಸ್‌ನ ಜಿಎಂ ಕೆ.ಮಹೇಶ ಕಾಮತ್, ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಲೆಕ್ಕಪರಿಶೋಧಕ ಗೋಪಾಲಕೃಷ್ಣ ಭಟ್, ಉದ್ಯಮಿಗಳಾದ ಪ್ರಕಾಶ ಪ್ರಭು, ರೀತಾ ಪ್ರಕಾಶ ಪ್ರಭು, ಪುಷ್ಪಲತಾ ರಘುನಂದನ ಕಾಮತ್, ವೇದಿಕೆ ಸಂಚಾಲಕ ಆರ್.ವಿವೇಕಾನಂದ ಶೆಣೈ, ವಿದ್ಯಾಪೋಷಕ ನಿಧಿ ಸಂಚಾಲಕ ವಿಜಯ ಕುಮಾರ್ ಶೆಣೈ ಉಪಸ್ಥಿತರಿದ್ದರು.
ವಿದ್ಯಾರ್ಥಿ ಪೋಷಕ ನಿಧಿ ಅಧ್ಯಕ್ಷ ಲೆಕ್ಕಪರಿಶೋಧಕ ಎಸ್.ಎಸ್. ನಾಯಕ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ವೇದಿಕೆ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ನಿರೂಪಿಸಿ, ಅಧ್ಯಕ್ಷ ಜಿ.ಸತೀಶ ಹೆಗಡೆ ವಂದಿಸಿದರು. ದಿ.ಎಂ.ವಿ.ಕಿಣಿಯವರ ಜೀವನ ಸಾಧನೆಯ ಸಾಕ್ಷ್ಯಚಿತ್ರವನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.