ಉಡುಪಿ ಜಿಲ್ಲೆಯ 82 ಸರಕಾರಿ ಕಚೇರಿಗಳು ‘ತಂಬಾಕು ಮುಕ್ತ ಕಚೇರಿ’
ಆರೋಗ್ಯ ಇಲಾಖೆಯ ಸಭೆಯಲ್ಲಿ ಡಿಸಿ ಡಾ.ವಿದ್ಯಾಕುಮಾರಿ
ಉಡುಪಿ, ಜು.28: ಮಳೆಗಾಲವು ಕೀಟಜನ್ಯ ರೋಗಗಳ ಹರಡುವಿಕೆಗೆ ಪೂರಕವಾದ ವಾತಾವರಣವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಸೂಚಿಸಿದ್ದಾರೆ.
ಶುಕ್ರವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯ ಸರಕಾರಿ ಕಚೇರಿಗಳನ್ನು ತಂಬಾಕು ಮುಕ್ತ ಕಚೇರಿಗಳನ್ನಾಗಿ ಅನುಷ್ಠಾನಗೊಳಿಸಿದ್ದು, ಇದುವರೆಗೆ 51 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರ, 13 ಗ್ರಾಮ ಪಂಚಾಯತ್ ಕಚೇರಿ, 18 ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಚೇರಿಗಳನ್ನು ‘ತಂಬಾಕು ಮುಕ್ತ ಕಚೇರಿ’ ಎಂದು ಘೋಷಿಸಲಾಗಿದೆ ಎಂದರು.
ಹಾಸಿಗೆ ಪೀಡಿತರಾಗಿರುವ ಎಂಡೋಸಲ್ಫಾನ್ ಸಂತ್ರಸ್ಥರಿಗೆ ಅವರ ಮನೆಗೆ ತೆರಳಿ ಅವಶ್ಯಕತೆ ಇರುವ ಆರೋಗ್ಯ ಸೇವೆಯನ್ನು ನೀಡಬೇಕು. ಅವರಿಗೆ ಅಂಗವಿಕಲತೆಯ ಪ್ರಮಾಣ ಪತ್ರವನ್ನು ಸಹ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬೀಡಿ ಕಾರ್ಮಿಕರ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಯ ಸುಧಾರಣೆ ಹಾಗೂ ಪರಿಹಾರಾತ್ಮಕ ಯೋಜನೆಯಡಿ ಬೀಡಿ ಕಾರ್ಮಿಕರುಗಳ ಜೀವನಾ ದಾಯಕ್ಕೆ ಪರ್ಯಾಯ ಉದ್ಯೋಗ ಕೈಗೊಳ್ಳಲು ಸ್ವ-ಉದ್ಯೋಗ ತರಬೇತಿ ನೀಡಿ, ಸ್ವಂತ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ನಗರ ಸ್ಥಳೀಯ ಸಂಸ್ಥೆಗಳಿಂದ ಪ್ರತ್ಯೇಕ ಪರವಾನಿಗೆ ಪಡೆದವರು ಮಾತ್ರ ಮಾರಾಟ ಮಾಡಲು ಅವಕಾಶವಿದ್ದು, ಈ ಬಗ್ಗೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಕಾರ್ಯಾಗಾರ ನಡೆಸಬೇಕು ಎಂದರು.
ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸರಕಾರಿ ಆಸ್ಪತ್ರೆಗಳು ತಮ್ಮಲ್ಲಿಗೆ ಬರುವ ರೋಗಿಗಳನ್ನು ಇತರೆ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುವುದು ಕಡಿಮೆಯಾಗಬೇಕು. ಅವಶ್ಯವಿದ್ದಲ್ಲಿ ಮಾತ್ರ ಶಿಫಾರಸು ಮಾಡಬೇಕು ಎಂದರು.
ಗರ್ಭಿಣಿಯರಿಗೆ ಸೂಕ್ತ ಸಮಯದಲ್ಲಿ ಆರೋಗ್ಯ ತಾಯಿ ಕಾರ್ಡ್‌ಗಳನ್ನು ವಿತರಿಸಿ, ಕಾಲಕಾಲಕ್ಕೆ ತಪಾಸಣೆ ಮಾಡಿ, ಚಿಕಿತ್ಸೆ ನೀಡಿರುವ ಬಗ್ಗೆ ಕಾರ್ಡು ಗಳಲ್ಲಿ ನಮೂದಿಸಬೇಕು. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡುವುದರಿಂದ ತಾಯಿ ಹಾಗೂ ಶಿಶು ಮರಣವನ್ನು ತಡೆಗಟ್ಟಲು ಸಾಧ್ಯವಾ ಗುತ್ತದೆ ಎಂದರು.
ಮಕ್ಕಳು ಯಾವುದೇ ಲಸಿಕೆಗಳಿಂದ ವಂಚಿತರಾಗದಂತೆ ರೋಗ ನಿರೋಧಕ ಚುಚ್ಚುಮದ್ದುಗಳನ್ನು ಸರಕಾರ ನೀಡಿರುವ ಮಾರ್ಗಸೂಚಿ ಅನ್ವಯ ನಿಗದಿತ ಅವಧಿಯಲ್ಲಿ ಮಕ್ಕಳಿಗೆ ನೀಡಬೇಕು. ಅಗತ್ಯವಿದ್ದಲ್ಲಿ ಈ ಕಾರ್ಯಕ್ಕೆ ಇತರೆ ಇಲಾಖೆಗಳ ಸಹಕಾರ ಪಡೆಯುವಂತೆ ತಿಳಿಸಿದರು.
ಜನಸಾಮಾನ್ಯರು ಉತ್ತಮ ಆರೋಗ್ಯ ಹೊಂದಲು ಹಾಗೂ ರೋಗಗಳಿಂದ ದೂರವಿರಲು ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆಯ ಬಗ್ಗೆ ಆರೋಗ್ಯ ಶಿಕ್ಷಣ ನೀಡಬೇಕು ಎಂದರು.
ಜನ ಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಲಬೆರಕೆ ಆಹಾರ ಪದಾರ್ಥಗಳು ಮಾರುಕಟ್ಟೆಯಲ್ಲಿ ಮಾರಾಟವಾಗದಂತೆ ಎಚ್ಚರ ವಹಿಸಬೇಕು. ಆಹಾರ ಗುಣಮಟ್ಟದ ಬಗ್ಗೆ ಆಹಾರ ಮಾದರಿಗಳನ್ನು ತೆಗೆದು ಪರೀಕ್ಷಿಸಲು ಕ್ರಮ ತೆಗೆದುಕೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಹಿರಿಯ ಸಿವಿಲ್ ನ್ಯಾಯಾ ಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ. ಸುದೇಶ್ ಕುಮಾರ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.