ಜು.9ರಂದು ಉಡುಪಿ ಜಿಲ್ಲೆಯ ಎಲ್ಲಾ ಶಾಲೆಗಳು, ಪಿಯು ಕಾಲೇಜುಗಳಿಗೆ ರಜೆ ಘೋಷಣೆ
ಉಡುಪಿ, ಜು.8: ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತವಾಗಿ ಸುರಿಯುತ್ತಿರುವ ಮಳೆಯ ಕಾರಣ ಹಾಗೂ ಹವಾಮಾನ ಇಲಾಖೆ ಮಳೆಯ ತೀವ್ರತೆ ಕುರಿತಂತೆ ನೀಡಿರುವ ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜು.9ರ ಮಗಳವಾರ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗವನಾಡಿ ಕೇಂದ್ರಗಳಿಗೆ, ಅಲ್ಲದೇ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿದೆ.
ಉಳಿದಂತೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಹಾಗೂ ಐಟಿಐಗಳಿಗೆ ರಜೆಯನ್ನು ಘೋಷಿಸಲಾಗಿಲ್ಲ ಎಂದು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಸೋಮವಾರ ರಜೆ ನೀಡಿದ 47 ಶಾಲೆಗಳು: ಸೋಮವಾರ ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಧಿಕೃತವಾಗಿ ಶಾಲೆಗಳಿಗೆ ರಜೆಯನ್ನು ಘೋಷಿಸಿಲ್ಲವಾದರೂ, ಸ್ಥಳೀಯ ಪರಿಸ್ಥಿತಿಗಳನ್ನು ಲಕ್ಷಿಸಿ ಜಿಲ್ಲೆಯ ಒಟ್ಟು 47 ಶಾಲೆಗಳು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆದು ತಮ್ಮ ಶಾಲೆಗಳಿಗೆ ಇಂದು ರಜೆಯನ್ನು ನೀಡಿದ್ದವು ಎಂದು ಡಿಡಿಪಿಐ ಗಣಪತಿ ಅವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಬೈಂದೂರು ವಲಯದ 19, ಕುಂದಾಪುರ ವಲಯದ 20, ಉಡುಪಿ ಮತ್ತು ಬ್ರಹ್ಮಾವರ ವಲಯಗಳ ತಲಾ ನಾಲ್ಕು ಶಾಲೆಗಳು ದಿನದ ಮಟ್ಟಿಗೆ ರಜೆಯನ್ನು ನೀಡಿವೆ ಎಂದವರು ತಿಳಿಸಿದರು.