1115 ವಿದ್ಯಾರ್ಥಿಗಳಿಗೆ 95.59 ಲಕ್ಷ ರೂ. ಸಹಾಯಧನ ವಿತರಣೆ
ಕುಂದಾಪುರ, ಅ.1: ಉಡುಪಿ ಜಿಲ್ಲೆಯ ಪ್ರತಿಬಾವಂತ ಬಡ ವಿದ್ಯಾರ್ಥಿಗಳಿಗೆ 18 ವರ್ಷಗಳಿಂದ ಆರ್ಥಿಕ ನೆರವು ನೀಡುತ್ತಿ ರುವ ಉಡುಪಿ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆಯಾದ ವಿದ್ಯಾಪೋಷಕ್ ವತಿಯಿಂದ ಕುಂದಾಪುರದ ಬಂಟರ ಯಾನೆ ನಾಡವರ ಸಂಘದ ಸಹಕಾರದೊಂದಿಗೆ ವಿನಮ್ರ ಸಹಾಯಧನ ವಿತರಣಾ ಸಮಾರಂಭವು ರವಿವಾರ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸೋದೆ ಮಠಾಧೀಶ ಶ್ರೀವಿಶ್ವವಲ್ಲತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್, ಆನೆಗುಡ್ಡೆ ದೇವಸ್ಥಾನದ ಆಡಳಿತ ಮೊಕ್ತೇಸರ ರಮಣ ಉಪಾಧ್ಯ, ಕೃಷ್ಣಪ್ರಸಾದ್ ಅಡ್ಯಂತಾಯ, ರತ್ನಕುಮಾರ್, ಪುರುಷೋತ್ತಮ ಪಟೇಲ್, ಡಾ.ಶರತ್ ರಾವ್ ಉಪಸ್ಥಿತ ರಿದ್ದರು.
ಮನೋವೈದ್ಯ ಡಾ.ಕೆ.ಎಸ್.ಕಾರಂತ್, ವೈದ್ಯ ಡಾ.ಜೆ.ಎನ್.ಭಟ್, ನರೇಂದ್ರ ನಾಯಕ್, ಹಾಗೂ ಪ್ರವೀಣ್ ಗುಡಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಮಾರೋಪ ಸಮಾರಂಭದಲ್ಲಿ 1115 ವಿದ್ಯಾರ್ಥಿಗಳಿಗೆ 95.59ಲಕ್ಷ ರೂ. ಸಹಾಯಧನ ವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಂಗಳೂರು ಇನ್ಫೋಸಿಸ್ ಸಂಸ್ಥೆಯ ವಾಸುದೇವ ಕಾಮತ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.